ಯೋಗದಿಂದ ಸಹಯೋಗದ ತನಕ ಎಂಬ ಸಂದೇಶವನ್ನ ಸಾರಿದ ಪ್ರಧಾನಿ ಮೋದಿ ವಿಶ್ವ ಯೋಗ ದಿನವಾದ ಇಂದು ಎಂ ಯೋಗ ಆಪ್ನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಅಪ್ಲಿಕೇಶನ್ನಲ್ಲಿ ಯೋಗ ತರಬೇತಿ ವಿಡಿಯೋಗಳು ಇರಲಿವೆ.
ವಿಶ್ವಾದಾದ್ಯಂತ ಬಳಕೆಗೆ ಯೋಗ್ಯವಿರುವ ಈ ಅಪ್ಲಿಕೇಶನ್ ವಿವಿಧ ಭಾಷೆಗಳಲ್ಲಿ ಬಳಕೆದಾರರೊಂದಿಗೆ ಸಂವಹನ ನಡೆಸಲಿದೆ. ವಿಶ್ವಾದ್ಯಂತ ಯೋಗದ ಹಿರಿಮೆಯನ್ನ ಸಾರುವ ಸಲುವಾಗಿ ಈ ಅಪ್ಲಿಕೇಶನ್ನ್ನು ಲಾಂಚ್ ಮಾಡಲಾಗಿದೆ.
ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ದೇಶವನ್ನುದ್ದೇಶಿಸಿ ಮಾತನಾಡಿ ಪ್ರಧಾನಿ ಮೋದಿ, ವಿಶ್ವ ಆರೋಗ್ಯ ಸಂಸ್ಥೆಯ ಎದುರು ವಿಶ್ವ ಯೋಗ ದಿನದ ಆಚರಣೆಯ ಪ್ರಸ್ತಾಪವನ್ನ ಇಡುವ ಮುನ್ನವೇ ಯೋಗಾಸನವು ವಿಶ್ವದ ಎಲ್ಲರಿಗೂ ಕಲಿಯಲು ಸುಲಭವಾಗುವಂತೆ ಮಾಡಬೇಕು ಎಂಬ ಉದ್ದೇಶ ನಮ್ಮದಾಗಿತ್ತು ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ಇದೀಗ ಭಾರತ ಮತ್ತೊಂದು ಮಹತ್ವದ ಹೆಜ್ಜೆಯನ್ನ ಇರಿಸಿದೆ. ಇನ್ಮುಂದೆ ಎಂ ಯೋಗ ಆಪ್ ನಿಮ್ಮ ಮೊಬೈಲ್ನಲ್ಲೇ ಸಿಗಲಿದ್ದು ಈ ಮೂಲಕ ನೀವು ವಿವಿಧ ಭಾಷೆಗಳಲ್ಲಿ ಯೋಗ ತರಬೇತಿ ಪಡೆಯಬಹುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಎಂ ಯೋಗ ಆಪ್ ಆಧುನಿಕ ತಂತ್ರಜ್ಞಾನ ಹಾಗೂ ಪುರಾಣ ವಿಜ್ಞಾನದ ಸಮನ್ವಯವಾಗಿದೆ. ಇಡೀ ವಿಶ್ವಕ್ಕೆ ಯೋಗದ ಮಹತ್ವವನ್ನ ಸಾರುವಲ್ಲಿ ಈ ಅಪ್ಲಿಕೇಶನ್ ಮಹತ್ವದ ಪಾತ್ರ ವಹಿಸಲಿದೆ ಎಂದು ನಾನು ನಂಬಿದ್ದೇನೆ. ಇಡೀ ವಿಶ್ವಾದ್ಯಂತ ಯೋಗವು ಪಸರಿಸುವ ಮೂಲಕ ಒಂದು ವಿಶ್ವ, ಒಂದು ಆರೋಗ್ಯ ಎಂಬ ಸಂದೇಶ ಸಾರಲಿದೆ ಎಂದು ಹೇಳಿದ್ರು.
ಯೋಗದಿಂದ ಸಹಯೋಗದ ತನಕ ಎಂಬ ಮಂತ್ರವು ಹೊಸ ಭವಿಷ್ಯವನ್ನ ನೀಡೋದ್ರ ಜೊತೆಗೆ ಮಾನವ ಕುಲಕ್ಕೆ ಶಕ್ತಿಯನ್ನ ತುಂಬಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ರು.