ನವದೆಹಲಿ: ಆಫ್ಘಾನಿಸ್ಥಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಿವಾಸದಲ್ಲಿ ಇವತ್ತು ಕೂಡ ಮಹತ್ವದ ಸಭೆ ನಡೆಯಲಿದೆ.
ದೆಹಲಿಯ 7 ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ರಾಷ್ಟ್ರೀಯ ಭದ್ರತೆ ಮೇಲಿನ ಸಂಪುಟ ಸಮಿತಿ ಸಭೆ ನಡೆಸಲಾಗುವುದು. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ಅಸ್ಥಿರತೆ ಉಂಟಾಗಿದೆ. ಇದರಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಮತ್ತು ಕೈಗೊಳ್ಳಬೇಕಿರುವ ಕ್ರಮಗಳ ಕುರಿತಂತೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಮತ್ತೆ ತುರ್ತು ಸಭೆ ಕರೆಯಲಾಗಿದೆ.
ಉಗ್ರರ ಉಪಟಳ ಹೆಚ್ಚಾಗುವ ಆತಂಕದಿಂದ ಪ್ರಧಾನಿ ಮೋದಿ ತುರ್ತು ಸಂದೇಶ ರವಾನಿಸಿದ್ದಾರೆ. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್, ಎಸ್ ಜೈಶಂಕರ್, ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗಿಯಾಗಿದ್ದರು.
ಅಫ್ಘಾನಿಸ್ತಾನ ಪರಿಸ್ಥಿತಿಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಮೋದಿ, ಭಾರತದ ಹಿತಾಸಕ್ತಿ ರಕ್ಷಣೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ. ಭಾರತಕ್ಕೆ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ, ತಾಲಿಬಾನಿಗಳಿಂದ ಆಗುವ ಅನಾಹುತಗಳ ಕುರಿತು, ಉಗ್ರರಿಂದ ಆಂತರಿಕ ಭದ್ರತೆಗೆ ತೊಂದರೆಯಾದರೆ ಮತ್ತು ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚಾದರೆ ಹೆಚ್ಚಿನ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಹೂಡಿಕೆ ಮಾಡಿರುವುದರಿಂದ ಭಾರತಕ್ಕೆ ಹೇಗೆ ಹೊಡೆತ ಬೀಳುತ್ತದೆ. ಮುಂದೆ ಯಾವ ರೀತಿ ಸಂಬಂಧ ಹೊಂದಬೇಕು ಮತ್ತು ಮುಂದುವರೆಸಬೇಕು ಎಂದು ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ಮೋದಿ ಸಭೆಯಲ್ಲಿ ಹಲವು ಸಲಹೆ ನೀಡಿದ್ದು, ಭಾರತ ತನ್ನ ಪ್ರಜೆಗಳ ರಕ್ಷಣೆ ಕುರಿತು ಮಾತ್ರ ಚಿಂತಿಸುವುದಿಲ್ಲ. ಭಾರತಕ್ಕೆ ಬರುವ ಇಚ್ಛೆ ವ್ಯಕ್ತ ಪಡಿಸುವ ಆಫ್ಘಾನಿಸ್ತಾನದಲ್ಲಿರುವ ಹಿಂದೂಗಳು, ಸಿಖ್ ಸಮುದಾಯದವರಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳಬೇಕು. ಭಾರತದ ಸಹಾಯ ಕೇಳುವ ಆಫ್ಘಾನಿಸ್ತಾನದವರಿಗೆ ನೆರವಾಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆನ್ನಲಾಗಿದೆ.