ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಭಯೋತ್ಪಾದನೆಯನ್ನು ರಾಜಕೀಯ ಅಸ್ತ್ರದಂತೆ ಬಳಸಲಾಗುತ್ತಿದೆ ಎಂದು ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಪ್ರಧಾನಿ ಮೋದಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಭಯೋತ್ಪಾದನೆಯಿಂದ ಅವರಿಗೂ ತೊಂದರೆಯಾಗುತ್ತದೆ ಎಂದು ಪಾಕಿಸ್ತಾನದ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಆಫ್ಘಾನಿಸ್ತಾನ ವಿಚಾರದಲ್ಲಿ ಪಾಕಿಸ್ತಾನ ಮತ್ತು ಚೀನಾ ನಡೆಯ ಬಗ್ಗೆ ಪರೋಕ್ಷವಾಗಿ ಗುಡುಗಿದ ಅವರು, ರಾಜಕೀಯ ಅಸ್ತ್ರವಾಗಿ ಭಯೋತ್ಪಾದನೆ ಬಳಸಲಾಗುತ್ತಿದೆ. ಅದರಿಂದ ಅವರಿಗೆ ಕಂಟಕವಾಗುತ್ತದೆ ಎಂದರು.
ಸಮುದ್ರದ ಸಂಪನ್ಮೂಲ ಬಳಸಿಕೊಳ್ಳಬೇಕು. ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಚಾಣಕ್ಯನ ಮಾತುಗಳನ್ನು ಮೋದಿ ಉಲ್ಲೇಖಿಸಿದ್ದು, ಆಫ್ಘಾನಿಸ್ತಾನ ನೆಲ ಭಯೋತ್ಪಾದನೆಗೆ ಬಳಕೆಯಾಗಬಾರದು. ಅಲ್ಲಿನ ಸೂಕ್ಷ್ಮ ಪರಿಸ್ಥಿತಿಯನ್ನು ಯಾವುದೇ ದೇಶ ಬಳಸಬಾರದು. ತನ್ನ ಲಾಭಕ್ಕೆ ಆಫ್ಘಾನಿಸ್ತಾನ ಪರಿಸ್ಥಿತಿ ಬಳಸಬಾರದು. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡದಿದ್ದರೆ ಸಮಯವೇ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಸುಧಾರಣೆ ಆಗಲೇಬೇಕು. ವಿಶ್ವಸಂಸ್ಥೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಕೊರೋನಾ, ಹವಾಮಾನ ಬದಲಾವಣೆ, ಭಯೋತ್ಪಾದನೆ, ಆಫ್ಘಾನಿಸ್ಥಾನ ವಿಚಾರದಲ್ಲಿ ವಿಶ್ವಸಂಸ್ಥೆಯ ಬಗ್ಗೆ ಪ್ರಶ್ನೆ ಎದ್ದಿದೆ ಎಂದು ಮೋದಿ ಹೇಳಿದ್ದಾರೆ.