ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76 ನೇ ಅಧಿವೇಶನ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ.
ಕೊರೋನಾ ವಿಚಾರ ಪ್ರಸ್ತಾಪಿಸಿದ ಅವರು, ಅತಿದೊಡ್ಡ ಸಾಂಕ್ರಾಮಿಕ ರೋಗ ಎದುರಿಸಿದ್ದೇವೆ. ಕೊರೋನಾದಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಮೃತರ ಕುಟುಂಬದವರಿಗೆ ಸಾಂತ್ವಾನ ಹೇಳುತ್ತೇವೆ. ಮಹಾಮಾರಿ ಕಾರಣದಿಂದ ಜಗತ್ತು ತತ್ತರಿಸಿದೆ ಎಂದು ಹಿಂದಿಯಲ್ಲಿ ಭಾಷಣ ಮಾಡಿದರು.
ಭಾರತ ಸ್ವಾತಂತ್ರ್ಯದ 75ನೇ ವರ್ಷ ಪ್ರವೇಶಿಸಿದೆ. 23 ಕೋಟಿ ಜನರಿಗೆ ವಿಮೆ ನೀಡಿದ್ದೇವೆ. ಭಾರತ ಪ್ರಜಾಪ್ರಭುತ್ವದ ತಾಯಿ. ಪ್ರಜಾಪ್ರಭುತ್ವಕ್ಕೆ ಭಾರತ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಕಲುಷಿತ ಕುಡಿಯುವ ನೀರು ಜಗತ್ತಿನ ಹಲವೆಡೆ ಸಮಸ್ಯೆಯಾಗಿದೆ. ಬಡವರು ಇದರಿಂದ ತುಂಬಾ ತೊಂದರೆಗೆ ಒಳಗಾಗಿದ್ದಾರೆ. ನಾವು 17 ಕೋಟಿ ಮನೆಗಳಿಗೆ ಶುದ್ಧ ಕುಡಿಯುವ ನೀರು ತಲುಪಿಸಿದ್ದೇವೆ. ಏಕಾತ್ಮ ಮಾನವತಾವಾದ ನಮ್ಮ ಮೂಲಮಂತ್ರವಾಗಿದೆ. ಅಭಿವೃದ್ಧಿ ತಲುಪಿಸುವುದು ನಮ್ಮ ಆದ್ಯತೆಯಾಗಿದೆ. 6 ಲಕ್ಷ ಹಳ್ಳಿಗಳಲ್ಲಿ ಡ್ರೋನ್ ಮ್ಯಾಪ್ ಮಾಡಿ ಡಿಜಿಟಲ್ ರೆಕಾರ್ಡ್ ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತವು ವಿಶ್ವದ ಮೊದಲ ಡಿಎನ್ಎ ಲಸಿಕೆ ಅಭಿವೃದ್ಧಿಪಡಿಸಿದೆ. ಇದನ್ನು 12 ವರ್ಷಕ್ಕಿಂತ ಮೇಲ್ಪಟ್ಟ ಯಾರಿಗಾದರೂ ನೀಡಬಹುದು. ಒಂದು ಎಂಆರ್‌ಎನ್‌ಎ ಲಸಿಕೆ ಅಭಿವೃದ್ಧಿ ಅಂತಿಮ ಹಂತದಲ್ಲಿದೆ. ಭಾರತೀಯ ವಿಜ್ಞಾನಿಗಳು ಸಹ COVID19 ವಿರುದ್ಧ ಮೂಗಿನ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದರು.
‘ಅಂತ್ಯೋದಯ’ ತತ್ವ ಮನಸ್ಸಿನಲ್ಲಿಟ್ಟುಕೊಂಡು ಭಾರತವು ಇಂದು ಸಮಗ್ರ ಸಮಾನತೆಯ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ನಮ್ಮ ಆದ್ಯತೆಯೆಂದರೆ ಅಭಿವೃದ್ಧಿಯು ಎಲ್ಲರನ್ನೂ ಒಳಗೊಳ್ಳಬೇಕು, ಎಲ್ಲವನ್ನು ವ್ಯಾಪಿಸಬೇಕು, ಸಾರ್ವತ್ರಿಕವಾಗಿರಬೇಕು ಮತ್ತು ಎಲ್ಲವನ್ನು ಪೋಷಿಸಬೇಕು ಎಂಬುದಾಗಿದೆ ಎಂದು ಮೋದಿ ಹೇಳಿದ್ದಾರೆ.