ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ದೇಶದ 11 ಕೋಟಿಗೂ ಅಧಿಕ ರೈತರಿಗೆ ಪ್ರಯೋಜನವಾಗಿದೆ. 2018ರಲ್ಲಿ ಆರಂಭಗೊಂಡ ಈ ಯೋಜನೆ ಮೂಲಕ ರೈತರಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ.
ಕೃಷಿ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಕೊಂಚ ನಿರಾಳತೆ ಕೊಡಲೆಂದು ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ ಯೋಜನೆಗೆ ಚಾಲನೆ ಕೊಟ್ಟಿದ್ದು, ಇದರಿಂದ ನಿವೃತ್ತರಾಗುವ ರೈತರು ಮಾಸಿಕ 3000 ರೂ.ಗಳಂತೆ ವರ್ಷಕ್ಕೆ 36,000 ರೂಪಾಯಿಗಳನ್ನು ಸ್ವೀಕರಿಸಲಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ನೋಂದಾಯಿತರಾದ ರೈತರು ಮಾನ್ ಧನ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಈ ಯೋಜನೆಗೆ ನೋಂದಾಯಿತನಾದ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ರೈತನೂ ಸಹ ಮಾಸಿಕ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.
ಎರಡು ಹೆಕ್ಟೇರ್‌ಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಇರುವ ರೈತರು ಮಾನ್ ಧನ್ ಯೋಜನೆಗೆ ನೋಂದಾಯಿತರಾಗಬಹುದು. ಈ ಕ್ರಿಯೆಗೆ ಹೆಚ್ಚುವರಿ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ.
ಪಿಂಚಣಿ ಲಾಭ ಪಡೆಯಬೇಕಾದಲ್ಲಿ ರೈತರು ಸ್ಕೀಂನಲ್ಲಿ ಕನಿಷ್ಠ 20 ವರ್ಷ ಮುಂಚಿನಿಂದಲೇ ಹೂಡಿಕೆ ಮಾಡಬೇಕಾಗುತ್ತದೆ. 18 ವರ್ಷ ಮೇಲ್ಪಟ್ಟ ರೈತರು ನಿವೃತ್ತಿ ನಂತರದ ಪಿಂಚಣಿಗೆ ಹೂಡಿಕೆ ಮಾಡಲು ಅರ್ಹರಾಗಿದ್ದಾರೆ.
ಉದಾಹರಣೆಗೆ: ನಿಮಗೆ 18 ವರ್ಷ ವಯಸ್ಸಾಗಿದ್ದಲ್ಲಿ, ಪ್ರತಿ ತಿಂಗಳು ನೀವು 55 ರೂಪಾಯಿ ಪಾವತಿ ಮಾಡಬೇಕು. ನಿಮಗೆ 30 ವರ್ಷ ವಯಸ್ಸಾಗಿದ್ದರೆ ಪ್ರತಿ ತಿಂಗಳು 110 ರೂಪಾಯಿ ಪಾವತಿ ಮಾಡಬೇಕು. 40 ವರ್ಷ ಮೇಲ್ಪಟ್ಟ ರೈತರು ಪ್ರತಿ ತಿಂಗಳು 200 ರೂಪಾಯಿಗಳಷ್ಟು ಪಾವತಿ ಮಾಡಬೇಕಾಗುತ್ತದೆ.