
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನವಾದ ಫೆಬ್ರವರಿ 27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯಿಂದ ನೇರವಾಗಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಬಂದಿಳಿಯುವ ಮೂಲಕ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ.
ಅದೇ ದಿನ ಪ್ರಧಾನಿಯವರು ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಅನುದಾನವನ್ನು ದೇಶದ ಸುಮಾರು 9 ಕೋಟಿ ಅರ್ಹ ರೈತರ ಖಾತೆಗೆ ಜಮಾ ಮಾಡಲಿದ್ದಾರೆ. ತಲಾ ಎರಡು ಸಾವಿರ ರೂಪಾಯಿಯಂತೆ 18 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಪ್ರಧಾನಿಯವರು ಬಿಡುಗಡೆ ಮಾಡಲಿದ್ದಾರೆ.
ಕಳೆದ ತಿಂಗಳು ಯೋಜನೆಯ 13ನೇ ಕಂತಿನ ಹಣ ಬಿಡುಗಡೆಯಾಗಬೇಕಿತ್ತು. ವಿವಿಧ ಕಾರಣಗಳಿಂದಾಗಿ ತಡವಾಗಿದ್ದು, ಫೆಬ್ರವರಿ 27ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿಯವರು 13ನೇ ಕಂತಿನ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೈತರಿಗೆ ತಲಾ 2 ಸಾವಿರ ರೂ.ಗಳನ್ನು ಡಿಬಿಟಿ ಮೂಲಕ ಖಾತೆಗೆ ಜಮಾ ಮಾಡಲಿದ್ದಾರೆ ಎಂದು ಹೇಳಲಾಗಿದೆ.