ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈತರಿಗೆ ಖುಷಿ ಸುದ್ದಿ ನೀಡಿದ್ದಾರೆ. ಪಿಎಂ ಕಿಸಾನ್ ಯೋಜನೆಯ 9 ನೇ ಕಂತನ್ನು ಪ್ರಧಾನ ಮಂತ್ರಿ ಮೋದಿ ಬಿಡಗಡೆ ಮಾಡಿದ್ದಾರೆ. ಯೋಜನೆ ಅಡಿಯಲ್ಲಿ ಪ್ರತಿ ರೈತನ ಖಾತೆಗೆ 2000 ರೂಪಾಯಿ ವರ್ಗಾವಣೆಯಾಗಲಿದೆ. ಪ್ರಧಾನಿ ಮೋದಿ ಅವರು 9.75 ಕೋಟಿ ರೈತರ ಖಾತೆಗಳಿಗೆ 19,500 ಕೋಟಿ ಮೊತ್ತವನ್ನು ಕಳುಹಿಸಿದ್ದಾರೆ. ಈವರೆಗೆ 1.38 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ರೈತ ಕುಟುಂಬಗಳಿಗೆ ಈ ಯೋಜನೆಯಡಿ ನೀಡಲಾಗಿದೆ.
ಈ ಯೋಜನೆಯಡಿ ವರ್ಷಕ್ಕೆ 6 ಸಾವಿರ ರೂಪಾಯಿ ಸರ್ಕಾರ ನೀಡುತ್ತದೆ. ಮೂರು ಇನ್ಸ್ಟಾಲ್ಮೆಂಟ್ ನಲ್ಲಿ ಹಣ ನೀಡುತ್ತದೆ. ಮೊದಲ ಇನ್ಸ್ಟಾಲ್ಮೆಂಟ್ ಡಿಸೆಂಬರ್ ಒಂದರಿಂದ ಮಾರ್ಚ್ 31ರೊಳಗೆ ಬರುತ್ತದೆ. ಎರಡನೇ ಇನ್ಸ್ಟಾಲ್ಮೆಂಟ್ ಏಪ್ರಿಲ್ ಒಂದರಿಂದ ಜುಲೈ 31ರೊಳಗೆ ರೈತರಿಗೆ ಸಿಗುತ್ತದೆ. ಮೂರನೇ ಇನ್ಸ್ಟಾಲ್ಮೆಂಟ್ ಆಗಸ್ಟ್ ಒಂದರಿಂದ ನವೆಂಬರ್ 30ರೊಳಗೆ ಸಿಗುತ್ತದೆ.
ನಿಮ್ಮ ಖಾತೆಗೂ ಹಣ ಬಂದಿದೆಯಾ ಎಂಬುದನ್ನು ಸುಲಭವಾಗಿ ಚೆಕ್ ಮಾಡಬಹುದು. ಮೊದಲು ಪಿಎಂ ಕಿಸಾನ್ ಯೋಜನೆ ವೆಬ್ಸೈಟ್ ಗೆ ಹೋಗಬೇಕು. ಮುಖ್ಯ ಪುಟದಲ್ಲಿ ಫಾರ್ಮರ್ಸ್ ಕಾರ್ನರ್ ಸಿಗುತ್ತದೆ. ಅಲ್ಲಿ ಫಲಾನುಭವಿಗಳ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಹೊಸ ಪೇಜ್ ತೆರೆದುಕೊಂಡ ಮೇಲೆ ಅಲ್ಲಿ ಸೂಚಿಸಿದ ಮಾಹಿತಿ ನೀಡಬೇಕು. ಆಧಾರ್ ನಂಬರ್, ಅಕೌಂಟ್ ನಂಬರ್, ಮೊಬೈಲ್ ನಂಬರ್ ನಮೂದಿಸಬೇಕು. ನಂತ್ರ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಯೋಜನೆ ಬಗ್ಗೆ ಮಾಹಿತಿ ಸಿಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹಾಯವಾಣಿ ಸಂಖ್ಯೆ 155261 ಅಥವಾ ಟೋಲ್ ಫ್ರೀ 1800115526 ಅಥವಾ 011-23381092 ನ ಸಹಾಯವಾಣಿಯನ್ನು ಸಂಪರ್ಕಿಸಬಹುದು. ದೂರಿದ್ದಲ್ಲಿ ಇ-ಮೇಲ್ ಐಡಿ pmkisan-ict@gov.in ಗೆ ಮೇಲ್ ಮಾಡಬಹುದು. ಅದೇ ಸಮಯದಲ್ಲಿ, ಈ ಯೋಜನೆಯ ಲಾಭವನ್ನು ಪಡೆಯಲು ಮತ್ತು ಇನ್ನೂ ಅರ್ಜಿ ಸಲ್ಲಿಸದ ರೈತರು ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.