ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಸರ್ಕಾರ ರೈತರಿಗೆ ಆರ್ಥಿಕ ಸಹಾಯ ನೀಡುತ್ತಿದೆ. ಸರ್ಕಾರ ಒಂದು ವರ್ಷದಲ್ಲಿ 6000 ರೂಪಾಯಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ಕಳುಹಿಸುತ್ತದೆ.
ಈ ಮೊತ್ತವನ್ನು 2000 ರೂಪಾಯಿಗಳಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಇದುವರೆಗೆ 9 ಕಂತುಗಳನ್ನು ರೈತರ ಖಾತೆಗೆ ಕಳುಹಿಸಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪತಿ ಮತ್ತು ಪತ್ನಿ ಇಬ್ಬರೂ ಪಡೆಯಬಹುದೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಪತಿ ಮತ್ತು ಪತ್ನಿ ಇಬ್ಬರೂ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಲಾಭ ಪಡೆಯಲು ಸಾಧ್ಯವಿಲ್ಲ. ಇಬ್ಬರೂ ಹೆಸರು ನೋಂದಾಯಿಸಿದ್ರೆ ಒಬ್ಬರನ್ನು ನಕಲಿ ಎಂದು ಸರ್ಕಾರ ಘೋಷಿಸುತ್ತದೆ. ಹಾಗಾಗಿ ಪತಿ – ಪತ್ನಿ ಇಬ್ಬರಲ್ಲಿ ಒಬ್ಬರು ಮಾತ್ರ ಇದ್ರ ಲಾಭ ಪಡೆಯಬಹುದಾಗಿದೆ.
ಸರ್ಕಾರಕ್ಕೆ ಮೋಸ ಮಾಡಿ,ಈ ಯೋಜನೆ ಲಾಭ ಪಡೆಯುತ್ತಿರುವ ರೈತರನ್ನು ಈಗಾಗಲೇ ಸರ್ಕಾರ ಪತ್ತೆ ಮಾಡಿದೆ. ಹಾಗೆ ಅವರ ಖಾತೆಗೆ ಹಾಕಿದ್ದ ಹಣವನ್ನು ಹಿಂಪಡೆದಿದೆ. ನಿಯಮಗಳ ಪ್ರಕಾರ, ಕುಟುಂಬದ ಒಬ್ಬ ಸದಸ್ಯರು ಮಾತ್ರ ಪಿಎಂ ಕಿಸಾನ್ ಅಡಿಯಲ್ಲಿ ಕಂತು ಪಡೆಯಬಹುದು. ಒಂದು ಕುಟುಂಬದಲ್ಲಿ ಪತಿ, ಪತ್ನಿ ಅಥವಾ ಬೇರೆ ಸದಸ್ಯ ಇದ್ರ ಲಾಭ ಪಡೆಯುತ್ತಿದ್ದರೆ ವಂಚನೆ ಪ್ರಕರಣ ದಾಖಲಿಸಿ, ಶಿಕ್ಷೆ ನೀಡಲಾಗುತ್ತದೆ.
ಸರ್ಕಾರದ ಮಾಹಿತಿಯ ಪ್ರಕಾರ, ದೇಶದಲ್ಲಿ 42 ಲಕ್ಷಕ್ಕೂ ಹೆಚ್ಚು ಅನರ್ಹರು, ಪಿಎಂ ಕಿಸಾನ್ ಅಡಿಯಲ್ಲಿ ಹಣ ಪಡೆದಿದ್ದಾರೆ. ಈ ಯೋಜನೆಯಿಂದ ಹಣ ಪಡೆಯಲು ಅನೇಕ ಷರತ್ತುಗಳಿವೆ.
ರೈತರ ಕುಟುಂಬದಲ್ಲಿ ಯಾರಾದರೂ ತೆರಿಗೆ ಪಾವತಿಸಿದರೆ, ಈ ಯೋಜನೆಯ ಲಾಭವು ಲಭ್ಯವಿರುವುದಿಲ್ಲ.
ರೈತನು ತನ್ನ ಕೃಷಿ ಭೂಮಿಯನ್ನು ಕೃಷಿ ಕೆಲಸಕ್ಕೆ ಬಳಸದೆ, ಇತರ ಕೆಲಸಗಳನ್ನು ಮಾಡುತ್ತಿದ್ದರೆ ಅಥವಾ ಇತರರ ಹೊಲಗಳಲ್ಲಿ ಕೃಷಿ ಕೆಲಸ ಮಾಡುತ್ತಿದ್ದರೆ ಆತನಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.
ಹೊಲದಲ್ಲಿ ಬೇಸಾಯ ಮಾಡುತ್ತಿದ್ದರೆ, ಹೊಲ ಆತನ ಹೆಸರಿನಲ್ಲಿ ಇಲ್ಲವೆಂದ್ರೆ ಆತ ಕೂಡ ಇದ್ರ ಲಾಭ ಪಡೆಯಲು ಸಾಧ್ಯವಿಲ್ಲ.
ಸರ್ಕಾರಿ ಉದ್ಯೋಗಿಯಾಗಿದ್ದರೆ, ನಿವೃತ್ತರಾಗಿದ್ದರೆ ಅಥವಾ ಮಾಜಿ ಸಂಸದ, ಎಂಎಲ್‌ಎ, ಸಚಿವರಾಗಿದ್ದರೆ ಅವರು ಕೂಡ ರೈತ ಯೋಜನೆಯ ಲಾಭಕ್ಕೆ ಅನರ್ಹರು. ವೃತ್ತಿಪರ ನೋಂದಾಯಿತ ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಅವರ ಕುಟುಂಬದ ಸದಸ್ಯರು ಕೂಡ ಅನರ್ಹರ ಪಟ್ಟಿಯಲ್ಲಿ ಬರುತ್ತಾರೆ.