ಜನಸಾಮಾನ್ಯರಿಗೆ ಅನುಕೂಲವಾಗಲೆಂದು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಆದ್ರೆ ಸರ್ಕಾರದ ಯೋಜನೆಯನ್ನು ಅನೇಕರು ದುರುಪಯೋಗಪಡಿಸಿಕೊಳ್ತಿದ್ದಾರೆ. ಇಲ್ಲದವರ ಬದಲು ಉಳ್ಳವರೇ ಇದ್ರ ಲಾಭ ಪಡೆಯುತ್ತಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲೂ ಇದೇ ಆಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅನೇಕರು ಇದ್ರ ಲಾಭ ಪಡೆದಿದ್ದಾರೆ. ಈಗ ಅವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ಯೋಜನೆಗೆ ಅನರ್ಹರಾಗಿರುವ 42 ಲಕ್ಷ ರೈತರಿಂದ ಕೇಂದ್ರ ಸರ್ಕಾರ 3,000 ಕೋಟಿ ರೂಪಾಯಿ ವಸೂಲಿ ಮಾಡಲಿದೆ. ಉತ್ತರ ಪ್ರದೇಶದಲ್ಲಿ ಇಂತಹ 7.10 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ರಾಜ್ಯ ಕೃಷಿ ಇಲಾಖೆ ನಡೆಸಿದ ತನಿಖೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಅಂತಹ ಅನರ್ಹ ರೈತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ.
ಅನರ್ಹ ರೈತರನ್ನು ಈ ಯೋಜನೆಯಿಂದ ಹೊರಗಿಡಲು ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊತ್ತವನ್ನು ಅವರಿಂದ ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ಅಂತಹ ರೈತರನ್ನು ಗುರುತಿಸಿದ್ದು, ಅವರನ್ನು ಈ ಯೋಜನೆಯಿಂದ ಹೊರಗಿಡಲಾಗುವುದು. ಅಸ್ಸಾಂನ ಅನರ್ಹ ರೈತರಿಂದ 554 ಕೋಟಿ, ಉತ್ತರ ಪ್ರದೇಶದ ಅನರ್ಹ ರೈತರಿಂದ 258 ಕೋಟಿ, ಬಿಹಾರದ ಅನರ್ಹ ರೈತರಿಂದ 425 ಕೋಟಿ ಮತ್ತು ಪಂಜಾಬ್ ಅನರ್ಹ ರೈತರಿಂದ 437 ಕೋಟಿ ರೂಪಾಯಿ ವಸೂಲಿ ಮಾಡಲಾಗುವುದು.
ಇದಲ್ಲದೆ ಯಾರಿಗೆ ಈ ಯೋಜನೆ ಲಾಭ ಸಿಗುವುದಿಲ್ಲ ಎಂಬ ವಿಷ್ಯವನ್ನೂ ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ರೈತನ ಕುಟುಂಬದ ಯಾವುದೇ ಸದಸ್ಯರು ತೆರಿಗೆ ಪಾವತಿಸುತ್ತಿದ್ದರೆ ಅವರನ್ನು ಈ ಯೋಜನೆಯಿಂದ ಹೊರಗಿಡಬಹುದು. ಇಲ್ಲಿ ಕುಟುಂಬ ಎಂದರೆ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು ಬರುತ್ತಾರೆ.
ರೈತನ ಜಮೀನು ಕೃಷಿಗೆ ಯೋಗ್ಯವಾಗಿರದೆ ವ್ಯವಹಾರಕ್ಕೆ ಬಳಕೆಯಾಗ್ತಿದ್ದರೆ ಈ ಯೋಜನೆಯ ಲಾಭ ಸಿಗುವುದಿಲ್ಲ.
ಕೃಷಿಗೆ ಯೋಗ್ಯವಾದ ಭೂಮಿ ಹೊಂದಿರದ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ.
ಕೃಷಿ ಭೂಮಿ ನಿಮ್ಮ ಹೆಸರಿನಲ್ಲಿರದೆ ಅಜ್ಜ, ಅಪ್ಪ ಅಥವಾ ಕುಟುಂಬದ ಬೇರೆಯವರ ಹೆಸರಿನಲ್ಲಿದ್ದರೆ ನಿಮಗೆ ಇದ್ರ ಲಾಭ ಸಿಗುವುದಿಲ್ಲ.
ಇತರರ ಭೂಮಿಯನ್ನು ಬಾಡಿಗೆಗೆ ತೆಗೆದುಕೊಂಡು ಕೃಷಿ ಮಾಡುತ್ತಿದ್ದರೂ ಈ ಯೋಜನೆಯ ಲಾಭ ಸಿಗುವುದಿಲ್ಲ.
ಕೃಷಿ ಭೂಮಿಯ ಮಾಲೀಕರಾಗಿದ್ದರೂ, ಸರ್ಕಾರಿ ಕೆಲಸದಲ್ಲಿದ್ದರೆ ಇದ್ರ ಲಾಭ ಸಿಗುವುದಿಲ್ಲ.
ಹಾಲಿ ಅಥವಾ ಮಾಜಿ ಸಂಸದ, ಶಾಸಕ, ಸಚಿವರಾಗಿದ್ದರೆ ಈ ಯೋಜನೆಯ ಲಾಭ ಸಿಗುವುದಿಲ್ಲ.
ವೃತ್ತಿಯಲ್ಲಿ ವೈದ್ಯರು, ಎಂಜಿನಿಯರ್, ವಕೀಲರು, ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದರೂ ಈ ಯೋಜನೆಗೆ ಅರ್ಹರಾಗುವುದಿಲ್ಲ.
ಕೃಷಿಕರಾಗಿದ್ದೂ, ಮಾಸಿಕ 10,000 ರೂಪಾಯಿ ಪಿಂಚಣಿ ಪಡೆಯುತ್ತಿದ್ದರೆ ಇದ್ರ ಲಾಭ ಸಿಗುವುದಿಲ್ಲ.
ನಗರ ಸಭೆಯ ಮಾಜಿ ಅಥವಾ ಪ್ರಸ್ತುತ ಮೇಯರ್ ಆಗಿದ್ದರೂ, ಜಿಲ್ಲಾ ಪಂಚಾಯಿತಿಗಳ ಮಾಜಿ ಅಥವಾ ಪ್ರಸ್ತುತ ಅಧ್ಯಕ್ಷರಾಗಿದ್ದರೂ ಈ ಯೋಜನೆಗೆ ಅರ್ಹರಲ್ಲ.