ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-KISAN)ಯೋಜನೆಯಡಿ ರೈತರ ಆದಾಯ ವೃದ್ಧಿಸಲು ಎಲ್ಲಾ ರೈತ ಕುಟುಂಬಗಳಿಗೆ ಪ್ರತಿ ವರ್ಷ 6 ಸಾವಿರ ರೂ.ಗಳನ್ನು ಪ್ರತಿ 4 ತಿಂಗಳಿಗೊಮ್ಮೆ ಒಟ್ಟು 3 ಸಮಾನ ಕಂತುಗಳಲ್ಲಿ ಹಾಗೂ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 2 ಕಂತುಗಳಲ್ಲಿ ವರ್ಷಕ್ಕೆ 4 ಸಾವಿರ ರೂ. ಗಳ ಆರ್ಥಿಕ ನೆರವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸುಮಾರು 50,458 ರೈತರು ನೋಂದಣಿಯಾಗಿದ್ದು, 46,744 ರೈತರ ಆಧಾರ್ ಪ್ರಮಾಣೀಕೃತಗೊಂಡಿದೆ. ಇಲ್ಲಿಯವರೆಗೆ 20,995 ಫಲಾನುಭವಿಗಳ ಇ-ಕೆವೈಸಿ ಆಗಿದ್ದು, 25,749 ಫಲಾನುಭವಿಗಳ ಇ-ಕೆವೈಸಿ ಮಾಡಿಸಿಕೊಳ್ಳಲು ಬಾಕಿ ಇದ್ದು, ಆದಷ್ಟು ಶೀಘ್ರ ಇಕೆವೈಸಿ ಮಾಡುವಂತೆ ಕೋರಿದರು.
ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಬೇಕಾದರೆ e-KYC ಮಾಡಿಸುವುದು ಅವಶ್ಯಕವಾಗಿದೆ. ಈಗಾಗಲೇ ನೇರ ಆರ್ಥಿಕ ನೆರವು ವರ್ಗಾವಣೆ ಚಾಲ್ತಿಯಲ್ಲಿದೆ. ಈ ಯೋಜನೆಯ ನೆರವು ಅರ್ಹ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು e-KYC ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.