ಬೆಂಗಳೂರು: ಪೌತಿ ಖಾತೆದಾರರಿಗೆ ಪಿಎಂ ಕಿಸಾನ್ ಯೋಜನೆ ಹಣ ಸಿಗದೇ ಪರದಾಡುವಂತಾಗಿದೆ. ಪತಿ ನಿಧನದ ನಂತರ ಪತ್ನಿ ಅರ್ಜಿ ಸಲ್ಲಿಸಿದ್ದರೆ ಸಹಾಯಧನ ಬರುತ್ತಿಲ್ಲ. ಅರ್ಜಿ ಸ್ವೀಕೃತವಾಗಿದ್ದರೂ ತಾಂತ್ರಿಕ ಕಾರಣದಿಂದ ಹಣ ಪಾವತಿ ವಿಳಂಬವಾಗುತ್ತಿದ್ದು, ಪ್ರೋತ್ಸಾಹಧನ ಸಿಗದೇ ಪರದಾಡುವಂತಾಗಿದೆ.
ಮನೆಯ ಯಜಮಾನ ನಿಧನದ ನಂತರ ಜಮೀನಿನ ಪಹಣಿ ಪತ್ನಿಯ ಹೆಸರಿಗೆ ವರ್ಗಾವಣೆಯಾಗಿ ವಾರಸುದಾರರ ಪಿಎಂ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿ ಸ್ವೀಕೃತಿಯಾಗಿದ್ದರೂ ಹಣ ಪಾವತಿಯಾಗುತ್ತಿಲ್ಲ. ಯೋಜನೆಯ ಫಲಾನುಭವಿ ರೈತ ನಿಧನರಾದ ಸಂದರ್ಭದಲ್ಲಿ ಆತನ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದ್ದ ಪಿಎಂ ಕಿಸಾನ್ ಯೋಜನೆ ಹಣ ನಿಲ್ಲುತ್ತದೆ. ನಂತರ ಜಮೀನಿನ ಆರ್.ಟಿ.ಸಿ. ಪೌತಿ ಖಾತೆಯಾಗಲಿದ್ದು, ಮೃತನ ಪತ್ನಿ, ಮಕ್ಕಳ ಹೆಸರಿಗೆ ಕೃಷಿ ಭೂಮಿ ಬರುತ್ತದೆ. ಹೀಗೆ ಪೌತಿ ಖಾತೆದಾರರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದ್ದರೂ ತಾಂತ್ರಿಕ ಕಾರಣದಿಂದ ಹಣ ಪಾವತಿಯಾಗುತ್ತಿಲ್ಲ ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಪೋರ್ಟಲ್ ನಲ್ಲಿ ನಿರ್ವಹಿಸುತ್ತಿದ್ದು, ತಾಂತ್ರಿಕ ತೊಂದರೆಯಿಂದ ಹೀಗಾಗಿದೆ. ಅನುಮೋದಿತ ಅರ್ಜಿ ವಿಲೇವಾರಿಗೆ ತಾಂತ್ರಿಕ ವಿಳಂಬ, ಲಾಗಿನ್ ಸಮಸ್ಯೆ ಉಂಟಾಗಿದ್ದು ಇದನ್ನು ಸರಿಪಡಿಸಿ ಶೀಘ್ರವೇ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಹೇಳಲಾಗಿದೆ.