ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಪಿಎಂ ಕಿಸಾನ್ ನ 11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. ಈ ಯೋಜನೆಗೆ ಅರ್ಹರಾಗಿರುವ ರೈತರ ಖಾತೆಗಳಿಗೆ ನೇರವಾಗಿ ಈ ಹಣ ಕ್ರೆಡಿಟ್ ಆಗಲಿದೆ.
ದೇಶದ ಕೋಟ್ಯಂತರ ಅತಿ ಸಣ್ಣ ಮತ್ತು ಬಡ ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯ ಭಾಗವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗೆ ಪ್ರತಿ ವರ್ಷ 6000 ರೂಪಾಯಿ ವರ್ಗಾವಣೆಯಾಗಲಿದೆ. ಮೂರು ಕಂತುಗಳಲ್ಲಿ ಈ ಹಣ ಸಂದಾಯವಾಗಲಿದ್ದು, ಪ್ರತಿ ಕಂತಿನಲ್ಲಿ 2,000 ರೂಪಾಯಿ ರೈತರ ಖಾತೆಗೆ ಜಮಾ ಆಗಲಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 1, 2022 ರಂದು ಪಿಎಂ ಕಿಸಾನ್ ಯೋಜನೆಯಡಿ 10 ನೇ ಕಂತಿನ ಹಣವನ್ನು ವರ್ಗಾವಣೆ ಮಾಡಿದ್ದರು. ರೈತರು ಇದೀಗ 11 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
ಸದ್ಯದಲ್ಲಿಯೇ 11 ನೇ ಕಂತಿನ ಹಣ ಜಮಾ ಆಗಲಿದೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಿಲ್ಲ. ಈಗ ಬರುತ್ತಿರುವ ವರದಿಗಳು ನಿಜವೇ ಆಗಿದ್ದಲ್ಲಿ ಕೇಂದ್ರ ಸರ್ಕಾರ 11 ನೇ ಕಂತಿನ ಹಣವನ್ನು ಮೇ 14, 2022 ರ ವೇಳೆಗೆ ಬಿಡುಗಡೆ ಮಾಡಲಿದೆ. ಏಕೆಂದರೆ, ಕಳೆದ ವರ್ಷದ ಮೇ 14 ರಂದು ಕಂತಿನ ಹಣವನ್ನು ಬಿಡುಗಡೆ ಮಾಡಿದ್ದನ್ನು ಗಮನಿಸಬಹುದಾಗಿದೆ.