
ನವದೆಹಲಿ: ಬುಡಕಟ್ಟು ಸಮುದಾಯದ ಜನರನ್ನು ಮುಖ್ಯವಾಹಿನಿಗೆ ತರುವ ಹಾಗೂ ಅವರನ್ನು ಆರ್ಥಿಕ, ಸಾಮಾಜಿಕವಾಗಿ ಸದೃಢರನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಆದಿವಾಸಿ ಜನಜಾತಿ ನ್ಯಾಯ ಅಭಿಯಾನ (ಪಿಎಂ ಜನ್ ಮನ್ ಯೋಜನೆ) ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಪೂವನಹಳ್ಳಿ ಗ್ರಾಮ ಆಯ್ಕೆಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಗಂಜಿಗೆರೆ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪೂವನಹಳ್ಳಿ ಗ್ರಾಮವನ್ನು ಪಿಎಂ ಜನ್ ಮನ್ ಯೋಜನೆಗೆ ಪರಿಗಣಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಈ ಯೋಜನೆಯನ್ನು ಘೋಷಿಸಿ ಬುಡಕಟ್ಟು ಸಮುದಾಯದ ಜನರು ವಾಸವಿರುವ ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನಾಗಿಸಿದ್ದಾರೆ. 79,000 ಕೋಟಿಗಳ ಈ ಬೃಹತ್ ಯೋಜನೆಯ ಮೂಲಕ ದೇಶದ 63,000 ಹಳ್ಳಿಗಳನ್ನು ಆಮೂಲಾಗ್ರವಾಗಿ ಅಭಿವೃದ್ದಿ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಶಿಕ್ಷಣ, ಆರೋಗ್ಯ, ವಸತಿ, ನೈರ್ಮಲ್ಯ, ಮೂಲಸೌಕರ್ಯ, ಶುದ್ಧ ಕುಡಿಯುವ ನೀರು, ಕೌಶಲ್ಯಾಭಿವೃದ್ಧಿ ಸೇರಿದಂತೆ 25ಕ್ಕೂ ಹೆಚ್ಚು ಜನೋಪಯೋಗಿ ಕಾರ್ಯಕ್ರಮಗಳನ್ನು 18 ಇಲಾಖೆಗಳು ಅನುಷ್ಠಾನಕ್ಕೆ ತರುತ್ತವೆ ಎಂದು ಮಾಹಿತಿ ನೀಡಿದ್ದಾರೆ.
ಪಿಆರ್‌ಡಿಐ ಮೂಲಕ ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಪೌಷ್ಠಿಕಾಂಶ ಹೆಚ್ಚಿಸುವ ಜತೆಗೆ ರಸ್ತೆ, ದೂರ ಸಂಪರ್ಕ ಸುಸ್ಥಿರ ಜೀವನಾವಕಾಶಗಳನ್ನು ಕಲ್ಪಿಸುವ ಉದ್ದೇಶದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆದಿವಾಸಿಗಳ ಗುಡಿ ಕೈಗಾರಿಕೆಗಳ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ತರಬೇತಿ ನೀಡಲಾಗುವುದು ಎಂದರು.
ಈ ಯೋಜನೆಗೆ ಯಾವುದೇ ಗ್ರಾಮವನ್ನು ಯಾಕೆ ಮಾಡಬೇಕಾದರೆ ಹಲವಾರು ಮಾನದಂಡಗಳನ್ನು ಬುಡಕಟ್ಟು ಸಚಿವಾಲಯ ನಿಗದಿ ಮಾಡಿದೆ. ಆ ಮಾನದಂಡಕ್ಕೆ ಅನುಗುಣವಾಗಿ ಗ್ರಾಮಗಳನ್ನು ಆಯ್ಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಪ್ರಥಮ ಪ್ರಯತ್ನವಾಗಿ ಮಾನದಂಡಗಳ ಅನುಗುಣವಾಗಿ ಪೂವನಹಳ್ಳಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ.
ಸದ್ಯಕ್ಕೆ ಪೂವನಹಳ್ಳಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗುವುದು ಎಂದು ಹೇಳಿದರು.