ಕಜಲಾಂಗ್: ಅರುಣಾಚಲ ಪ್ರದೇಶದ ಸಂಸದ ಹಾಗೂ ಕೇಂದ್ರ ಸಚಿವ ಕಿರಣ್ ರಿಜಿಜು ಅವರು, ಹಳ್ಳಿ ಜನರ ಜೊತೆ ಸಾಂಪ್ರದಾಯಿಕ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ವಿಡಿಯೋ ನೋಡಿದ ಪ್ರಧಾನಿ ಮೋದಿ ‘ಯೋಗ್ಯ (ತಕ್ಕ) ಡ್ಯಾನ್ಸರ್’ ಎಂದು ಟ್ವೀಟ್ ಮಾಡಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಬುಧವಾರ ಯೋಜನೆಯೊಂದರ ಪ್ರಗತಿ ಪರಿಶೀಲಿಸಲು ಭೇಟಿ ನೀಡಿದಾಗ, ಅರುಣಾಚಲ ಪ್ರದೇಶದ ಹಳ್ಳಿಯ ನಿವಾಸಿಗಳೊಂದಿಗೆ ನೃತ್ಯ ಮಾಡಿದ್ದಾರೆ. ಈಶಾನ್ಯ ರಾಜ್ಯದ ಕಜಲಾಂಗ್ ಹಳ್ಳಿಯ ಮಿಜಿ ಎಂದೂ ಕರೆಯಲ್ಪಡುವ ಸ್ಥಳೀಯ ಸಜೋಲಂಗ್ ಜನರು ತಮ್ಮ ಸಾಂಪ್ರದಾಯಿಕ ಹಾಡು ಮತ್ತು ನೃತ್ಯದೊಂದಿಗೆ ಸಚಿವರನ್ನು ಸ್ವಾಗತಿಸಿದ್ದಾರೆ.
ತಾಳಗಳು ಮತ್ತು ಡೋಲು ಬಡಿತಗಳ ನಡುವೆ, ಸಚಿವರು ಸಾಂಪ್ರದಾಯಿಕ ಜಾನಪದ ಗೀತೆಗಳಿಗೆ ನೃತ್ಯ ಮಾಡಿದ್ದಾರೆ. ಸಚಿವರ ನೃತ್ಯಕ್ಕೆ ನೆರೆದಿದ್ದ ಜನರು, ಹರ್ಷೋದ್ಗಾರದ ಜೊತೆಗೆ ಚಪ್ಪಾಳೆ ತಟ್ಟಿದ್ದಾರೆ. ಈ ಸಂಬಂಧ ಸ್ವತಃ ಸಚಿವರು ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವರ ಅದ್ಭುತ ನೃತ್ಯಕ್ಕೆ ಪ್ರಧಾನ ಮಂತ್ರಿ ತಲೆದೂಗಿದ್ದಾರೆ. “ನಮ್ಮ ಕಾನೂನು ಮಂತ್ರಿ ಕಿರಣ್ ರಿಜಿಜು ಕೂಡ ಒಬ್ಬ ಯೋಗ್ಯ ನೃತ್ಯಗಾರ. ಅರುಣಾಚಲ ಪ್ರದೇಶದ ರೋಮಾಂಚಕ ಮತ್ತು ವೈಭವದ ಸಂಸ್ಕೃತಿಯನ್ನು ನೋಡಲು ಸಂತೋಷವಾಗಿದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.