ಭಾರತ ಆಯೋಜಿಸುತ್ತಿರುವ ಜಿ20 ಪ್ರೆಸಿಡೆನ್ಸಿಗೆ ಸಂಬಂಧಿಸಿದಂತೆ ಲೋಗೋ ಡಿಸೈನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಮ್ಮ ಯುವ ಸಮುದಾಯದ ಸೃಜನಾತ್ಮಕತೆಯನ್ನು ಸಂಭ್ರಮಿಸಲು ಇದೊಂದು ವಿಶೇಷ ಸ್ಪರ್ಧೆಯಾಗಿದ್ದು, ಇದರಲ್ಲಿ ಎಲ್ಲರೂ ಸ್ಪರ್ಧೆ ಮಾಡುವುದು ಒಳ್ಳೆಯದು ಎಂದು ತಿಳಿಸಿದೆ.
1 ಡಿಸೆಂಬರ್ 2022 ರಿಂದ 30 ನವೆಂಬರ್ 2023 ರವರೆಗೆ ಭಾರತ ಜಿ20 ಪ್ರೆಸಿಡೆನ್ಸಿಯನ್ನು ಆಯೋಜಿಸುತ್ತಿದೆ. 2023 ರಲ್ಲಿ ಜಿ20 ಶೃಂಗಸಭೆಯನ್ನು ಸಹ ಆಯೋಜಿಸುತ್ತಿದೆ. ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಜಿ20 ಒಂದು ಪ್ರಮುಖ ವೇದಿಕೆಯಾಗಿದೆ. ಇದು ಜಾಗತಿಕ ಆರ್ಥಿಕ ಆಡಳಿತದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
BIG NEWS: PSI ಅಕ್ರಮ; ನೇಮಕಾತಿ ವಿಭಾಗದ 12 ಜನರ ವರ್ಗಾವಣೆ
ಈ ಹಿಂದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಜಿ20 ಪ್ರೆಸಿಡೆನ್ಸಿಯನ್ನು ಅನನ್ಯವಾಗಿ ಪ್ರತಿನಿಧಿಸುವ ಕಲ್ಪನೆಗಳುಳ್ಳ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಆರಂಭಿಸುತ್ತಿರುವುದಾಗಿ ಘೋಷಣೆ ಮಾಡಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಆರಿಂದಮ್ ಬಾಗ್ಚಿ ಅವರು, ಮುಂಬರುವ ಜಿ20 ಪ್ರೆಸಿಡೆನ್ಸಿಗಾಗಿ ಲೋಗೋ ಡಿಸೈನ್ ಸ್ಪರ್ಧೆಯನ್ನು ಆರಂಭಿಸುವುದನ್ನು ಘೋಷಿಸಲು ಸಂತೋಷವಾಗುತ್ತಿದೆ. ಅನನ್ಯವಾದ ರೀತಿಯಲ್ಲಿ ಈ ಜಿ20 ಯನ್ನು ಪ್ರತಿನಿಧಿಸುವ ನಿಮ್ಮ ಕಲ್ಪನೆಯನ್ನು 07 ಜೂನ್ 2022 ರೊಳಗೆ ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.