ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜನತೆಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದ್ದಾರೆ.
ಬಳಿಕ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ನಾನು ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಮಣಿಪುರದಲ್ಲಿ ಶಾಂತಿ ನೆಲೆಸಲು ಸರ್ಕಾರ ಕೈಗೊಳ್ಳುವ ಯಾವುದೇ ಕಾರ್ಯಕ್ಕೆ ನಮ್ಮ ಸಹಕಾರವಿರುತ್ತದೆ. ಇಲ್ಲಿ ಪರಿಸ್ಥಿತಿ ಈ ಮೊದಲಿನಂತೆ ಸಹಜ ಸ್ಥಿತಿಗೆ ಬರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬಳಿಕ ಪತ್ರಕರ್ತರು ಅನ್ಯ ವಿಷಯಗಳ ಕುರಿತು ಪ್ರಸ್ತಾಪಿಸಿದ್ದು ಇದಕ್ಕೆ ಉತ್ತರಿಸಲು ನಿರಾಕರಿಸಿದ ರಾಹುಲ್ ಗಾಂಧಿ, ವಿಷಯಾಂತರವಾಗುವುದು ಬೇಡ. ನಾನು ಮಣಿಪುರದ ಪರಿಸ್ಥಿತಿ ಅವಲೋಕಿಸಲು ಬಂದಿದ್ದೇನೆ. ಇದೊಂದು ಸುಂದರ ತಾಣ. ಇಲ್ಲಿ ಶಾಂತಿ ನೆಲೆಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿ ಪತ್ರಿಕಾಗೋಷ್ಠಿಯಿಂದ ನಿರ್ಗಮಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.