ಚೆನ್ನೈ: ಲೈಂಗಿಕ ಕಿರುಕುಳಕ್ಕೆ ಒಳಗಾದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಕೆಲವು ದಿನಗಳ ನಂತರ ಶಾಲಾ ಶಿಕ್ಷಕ ತನ್ನ ಜೀವನ ಅಂತ್ಯಗೊಳಿಸಿರುವ ಘಟನೆ ತಮಿಳುನಾಡಿನ ತಿರುಚಿರಪ್ಪಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಶಾಲಾ ಶಿಕ್ಷಕರೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರೂರಿನಲ್ಲಿ ಅದೇ ಶಾಲೆಯಲ್ಲಿ ಓದುತ್ತಿದ್ದ 17 ವರ್ಷದ ಬಾಲಕಿಯೊಬ್ಬಳು ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಘಟನೆ ಬೆಳಕಿಗೆ ಬಂದಿದೆ.
ಮೃತ ಶಿಕ್ಷಕನನ್ನು ಸರವಣನ್ ಎಂದು ಗುರುತಿಸಲಾಗಿದೆ. ಸಾಯುವ ಮುನ್ನ ತಾನು ನಿರಪರಾಧಿ ಎಂದು ಪತ್ರ ಬರೆದಿದ್ದಾರೆ. ದಯವಿಟ್ಟು ತನ್ನನ್ನು ಕ್ಷಮಿಸಿ, ನಿಮ್ಮೆಲ್ಲರನ್ನೂ ಕಳೆದುಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇನ್ನು ವಿದ್ಯಾರ್ಥಿನಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ವಾರ, ಕರೂರಿನಲ್ಲಿ 12 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಅಪರಿಚಿತ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಗಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಇದೀಗ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಶಿಕ್ಷಕನ ಸಾವಿಗೂ, ವಿದ್ಯಾರ್ಥಿನಿ ಆತ್ಮಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿಯ ಆತ್ಮಹತ್ಯೆ ನಂತರ ಕರೂರಿನಲ್ಲಿ ಹಲವು ಪ್ರತಿಭಟನೆಗಳು ನಡೆಯುತ್ತಿದ್ದು, ಪ್ರಕರಣದ ಕುರಿತು ಶೀಘ್ರ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನಾಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಬಾಲಕಿಯ ಸಾವಿನ ತನಿಖೆಗೆ ಪೊಲೀಸರು ತಂಡ ರಚಿಸಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.