ಮುಂಬೈನ ವಸಾಯಿಯಲ್ಲಿ 27 ವರ್ಷದ ಯುವಕನೊಬ್ಬ ಕಾರ್ಬನ್ ಮೊನಾಕ್ಸೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈತ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪೊಲೀಸರಿಗೆ ಎಚ್ಚರಿಕೆ ಪತ್ರ ಬರೆದಿದ್ದ.
ಬೆಂಗಳೂರಿನಲ್ಲಿರುವ ಆತನ ಸಹೋದರಿ ಮುಂಬೈ ಪೊಲೀಸ್ ಕಮಿಷನರ್ ಕಚೇರಿಗೆ ಇಮೇಲ್ ಕಳುಹಿಸಿ, ತನ್ನ ಸಹೋದರನ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ನಡೆಸಿದಾಗ, ಆತನ ಮೊಬೈಲ್ ಲೊಕೇಶನ್ ವಸಾಯಿಯ ಕಾಮನ್‌ನಲ್ಲಿ ಪತ್ತೆಯಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಮನೆಯ ಬಾಗಿಲಲ್ಲಿ “ಒಳಗೆ ಕಾರ್ಬನ್ ಮೊನಾಕ್ಸೈಡ್ ಇದೆ ; ಲೈಟ್ ಆನ್ ಮಾಡಬೇಡಿ” ಎಂದು ಬರೆದ ಎಚ್ಚರಿಕೆ ಪತ್ರ ಪತ್ತೆಯಾಗಿದೆ. ಮನೆಯೊಳಗೆ ವಿಷಾನಿಲದ ವಾಸನೆ ಬರುತ್ತಿತ್ತು. ಪೊಲೀಸರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ, ಉಸಿರಾಟದ ಸಾಧನಗಳನ್ನು ಅಳವಡಿಸಿಕೊಂಡು ಮನೆಯೊಳಗೆ ಪ್ರವೇಶಿಸಿದ್ದಾರೆ. ಅಲ್ಲಿ 27 ವರ್ಷದ ಯುವಕ ಸಾವನ್ನಪ್ಪಿರುವುದು ಪತ್ತೆಯಾಗಿದೆ. ಈತ ಕಾರ್ಬನ್ ಮೊನಾಕ್ಸೈಡ್ ಸಿಲಿಂಡರ್‌ನಿಂದ ವಿಷಾನಿಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹದ ಬಳಿ ಆತ್ಮಹತ್ಯೆ ಪತ್ರ ಕೂಡ ಪತ್ತೆಯಾಗಿದೆ.
ಈತ ಮನೆಗೆ ಅಳವಡಿಸಲಾಗಿದ್ದ ಕಿಟಕಿಗಳನ್ನು ಮುಚ್ಚಿದ್ದ. ಈತ ಕಳೆದ ಒಂದು ವರ್ಷದಿಂದ ವಸಾಯಿಯಲ್ಲಿ ವಾಸಿಸುತ್ತಿದ್ದ. ಈತ ಈ ಹಿಂದೆ ಪವೈನಲ್ಲಿ ವಾಸಿಸುತ್ತಿದ್ದು, ಅಲ್ಲಿನ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೃತದೇಹದ ಕೋಣೆಯ ಬಾಗಿಲಲ್ಲಿ, “ಒಳಗೆ ಕಾರ್ಬನ್ ಮೊನಾಕ್ಸೈಡ್ ಇದೆ. ದಯವಿಟ್ಟು ಲೈಟ್ ಆನ್ ಮಾಡಬೇಡಿ. ಪೊಲೀಸರಿಗೆ ಕರೆ ಮಾಡಿ” ಎಂದು ಬರೆದ ಮತ್ತೊಂದು ಎಚ್ಚರಿಕೆ ಪತ್ರ ಪತ್ತೆಯಾಗಿದೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈತ ವಿಷಾನಿಲ ಸಿಲಿಂಡರ್‌ಗಳನ್ನು ಎಲ್ಲಿಂದ ತಂದಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಆತ್ಮಹತ್ಯೆ ಪತ್ರದಲ್ಲಿ, ಆತ “ತನ್ನ ಕುಟುಂಬದ ಬೆಂಬಲಕ್ಕೆ ಧನ್ಯವಾದ” ಹೇಳಿದ್ದಾನೆ ಮತ್ತು “ಕಳೆದ ಒಂದೂವರೆ ವರ್ಷದಿಂದ ತಾನು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅದಕ್ಕೆ ಯಾವುದೇ ಪರಿಹಾರವಿಲ್ಲ ಮತ್ತು ಅದು ತನ್ನ ಕೆಲಸ ಮತ್ತು ಉತ್ತಮ ಜೀವನವನ್ನು ನಡೆಸಲು ಅಡ್ಡಿಯಾಗುತ್ತಿದೆ” ಎಂದು ತಿಳಿಸಿದ್ದಾನೆ. ಮನೆಯಲ್ಲಿ ಐದು ವಿಷಾನಿಲ ಸಿಲಿಂಡರ್‌ಗಳು ಪತ್ತೆಯಾಗಿವೆ.
ಮನೆಯ ಕಿಟಕಿಗಳನ್ನು ಮುಚ್ಚಲು ಸಹಾಯ ಮಾಡಿದ ಕಾರ್ಪೆಂಟರ್ ರೋಹಿತ್ ವಿಶ್ವಕರ್ಮ, ಎರಡು ದಿನಗಳ ಹಿಂದೆ ಮೃತನು ತನ್ನನ್ನು ಕರೆಸಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.