ನವದೆಹಲಿ: ನೀಟ್ ಪರೀಕ್ಷೆ ರದ್ದು ಮಾಡುವಂತೆ ಕೋರಿ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಸೆಪ್ಟೆಂಬರ್ 12 ರಂದು ನಡೆಸಲಾದ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಯಲ್ಲಿ ಕೋಚಿಂಗ್ ಸೆಂಟರ್ ಗಳು ಸಂಚು ರೂಪಿಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿವೆ ಎಂದು ಆರೋಪಿಸಲಾಗಿದೆ.
ಪರೀಕ್ಷಾ ಅಕ್ರಮದ ಕಾರಣ ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ಪುನಃ ನಡೆಸಬೇಕೆಂದು ಆದೇಶ ನೀಡಲು ಕೋರಿ ಸಾವಿರಾರು ವಿದ್ಯಾರ್ಥಿಗಳು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಬಾರಿ ಪರೀಕ್ಷೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಖರೀದಿಸಿದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ನೀಟ್ ಪರೀಕ್ಷೆ ನಡೆದ ದಿನವೇ ಸಿಬಿಐ ಅಧಿಕಾರಿಗಳು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. 50 ಲಕ್ಷ ರೂ. ವರೆಗೆ ಹಣ ಪಡೆದು ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಿಕೊಟ್ಟಿರುವ ಪ್ರಕರಣಗಳು ನಡೆದಿವೆ ಎಂದು ವಕೀಲರಾದ ಮಮತಾ ಶರ್ಮಾ ಹೇಳಿದ್ದಾರೆ. ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಮನವಿ ಮಾಡಲಾಗಿದೆ.