
ಕ್ರಿಕೆಟ್ ಮೈದಾನದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ನಡೆಯುತ್ತಿರುತ್ತವೆ. ಆದ್ರೆ ಈ ಬಾರಿ ಅಚ್ಚರಿಯ ಘಟನೆ ನಡೆದಿದೆ. ಕ್ರಿಕೆಟ್ ಬಿಟ್ಟು, ಎರಡೂ ತಂಡದ ಆಟಗಾರರು ಕಳ್ಳನನ್ನು ಹಿಡಿಯಲು ಓಡಿದ್ದಾರೆ. ಈ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.
ಚೆರ್ವೆಲ್ ಲೀಗ್ ಕ್ರಿಕೆಟ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಹಾರ್ಕೋರ್ಟ್ ಕ್ರಿಕೆಟ್ ಕ್ಲಬ್ ಮತ್ತು ವೊಲ್ವರ್ಕಾಟ್ ಕ್ಲಬ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ವ್ಯಕ್ತಿಯು ಮೈದಾನದ ಹತ್ತಿರ ಬೆಂಚ್ ಮೇಲೆ ಕುಳಿತಿದ್ದ. ಕೆಲ ಆಟಗಾರರು ಆತನ ಬಳಿ ಹೋಗಿದ್ದಾರೆ. ಇದನ್ನು ನೋಡಿದ ವ್ಯಕ್ತಿ ಓಡಲು ಶುರು ಮಾಡಿದ್ದಾನೆ. ಆತನನ್ನು ಎಲ್ಲರೂ ಬೆನ್ನು ಹತ್ತಿದ್ದಾರೆ.
ಕೊನೆಯಲ್ಲಿ ವ್ಯಕ್ತಿಯನ್ನು ಹಿಡಿಯುವಲ್ಲಿ ಆಟಗಾರರು ಯಶಸ್ವಿಯಾಗಿದ್ದಾರೆ. ಆಟಗಾರರ ಪರ್ಸ್ ನಿಂದ ಹಣ ಕದಿಯಲು ಈತ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಪೊಲೀಸ್ ಬರುವವರೆಗೂ ವ್ಯಕ್ತಿಯನ್ನು ಹಿಡಿದಿಟ್ಟಿದ್ದ ಆಟಗಾರರು ನಂತ್ರ ಪೊಲೀಸರಿಗೆ ಒಪ್ಪಿಸಿದ್ದಾರೆ. 32 ವರ್ಷದ ವ್ಯಕ್ತಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆಟವನ್ನು ಅಲ್ಲಿಗೆ ರದ್ದು ಮಾಡಲಾಗಿದೆ.