ಭಾರತೀಯ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಕೈ ಬಿಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ರವಾನಿಸಿದ ಬೆನ್ನಲ್ಲೇ ಇದಕ್ಕೆ ಮಣಿದಿರುವ ಪ್ಲೇ ಸ್ಟೋರ್, ಕೈ ಬಿಡಲಾಗಿದ್ದ ಅಪ್ಲಿಕೇಶನ್ ಗಳನ್ನು ಮರಳಿ ಸೇರ್ಪಡೆ ಮಾಡಿದೆ.
ನೌಕ್ರಿ ಡಾಟ್ ಕಾಮ್, 99 ಎಕರ್ಸ್ ಡಾಟ್ ಕಾಮ್, shaadi.com ಸೇರಿದಂತೆ ಹಲವು ಅಪ್ಲಿಕೇಶನ್ ಗಳನ್ನು ಈ ಮೊದಲು ಗೂಗಲ್ ಪ್ಲೇ ಸ್ಟೋರ್, ತೆಗೆದು ಹಾಕಿತ್ತು. ಇದಕ್ಕೆ ಭಾರತೀಯ ಉದ್ಯಮ ವಲಯದಿಂದ ವಿರೋಧ ವ್ಯಕ್ತವಾಗಿದ್ದು, ಬಳಿಕ ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಸ್ಪಷ್ಟ ಸೂಚನೆ ರವಾನಿಸಿತ್ತು.
ಅಂತಿಮವಾಗಿ ಇದಕ್ಕೆ ಮಣಿದು ಗೂಗಲ್ ಪ್ಲೇ ಸ್ಟೋರ್ ಕೈ ಬಿಡಲಾಗಿದ್ದ ಹಲವು ಅಪ್ಲಿಕೇಶನ್ ಗಳನ್ನು ಮರು ಸ್ಥಾಪಿಸಿದ್ದು, ಇನ್ಫೋ ಎಡ್ಜ್ ಸಂಸ್ಥಾಪಕ ಸಂಜೀವ್, ಅಪ್ಲಿಕೇಶನ್ ಗಳು ಪ್ಲೇ ಸ್ಟೋರ್ ಗೆ ಮರಳಿರುವುದನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಾಕಿರುವ ಪೋಸ್ಟ್ ನಲ್ಲಿ ಖಚಿತಪಡಿಸಿದ್ದಾರೆ.
ಇದರ ಮಧ್ಯೆ ಕೇಂದ್ರ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಗೂಗಲ್ ಮತ್ತು ಪ್ಲೇ ಸ್ಟೋರ್ ನಿಂದ ತೆಗೆದು ಹಾಕಲಾಗಿರುವ ಅಪ್ಲಿಕೇಶನ್ ಡೆವೆಲಪರ್ಸ್ ಗಳ ಜೊತೆ ಮುಂದಿನ ವಾರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.