ಬೆಂಗಳೂರು: ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಸಲು ಬಳಸುವ ಕಚ್ಚಾವಸ್ತು ಪಾಲಿಥಿನ್ ನಲ್ಲಿಯೂ ಭಾರತೀಯ ಗುಣಮಟ್ಟ ಸಂಸ್ಥೆ(BIS) ನಿಗದಿಪಡಿಸಿದ ಮಾನದಂಡ ಕಾಯ್ದುಕೊಳ್ಳಬೇಕೆಂದು ಕೇಂದ್ರ ಸರ್ಕಾರದ ವತಿಯಿಂದ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕೇಂದ್ರ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿ ಅಖಿಲ ಭಾರತ ಹೆಚ್.ಡಿ.ಪಿ.ಇ./ಪಿಪಿ ಫ್ಯಾಬ್ರಿಕ್ ಮ್ಯಾನುಫ್ಯಾಕ್ಚರರ್ಸ್ ಸಂಘ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ವಿಚಾರಣೆ ನಡೆದು ಆದೇಶ ನೀಡಲಾಗಿದೆ.
ಪ್ಲಾಸ್ಟಿಕ್ ಉತ್ಪಾದನೆಗಳ ಗುಣಮಟ್ಟ ಖಚಿತಪಡಿಸಿಕೊಳ್ಳಲು ಉತ್ಪಾದನಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ, ಪರಿಶೀಲನೆ ಅಗತ್ಯವಾಗಿದೆ. ಪರಿಸರ, ಸಾರ್ವಜನಿಕರಿಗೆ ಅಪಾಯಕಾರಿಯಾಗದಂತೆ ನೋಡಿಕೊಳ್ಳಲು ಪ್ಲಾಸ್ಟಿಕ್ ಉತ್ಪಾದನೆಯ ಪ್ರತಿ ಕಚ್ಚಾ ವಸ್ತುವಿನಲ್ಲಿಯೂ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಹೀಗಾಗಿ ಬಿಐಎಸ್ ಮಾನದಂಡಗಳನ್ನು ಪಾಲಿಸಬೇಕು ಎಂದು ಹೈಕೋರ್ಟ್ ನ್ಯಾಯ ಪೀಠದ ಆದೇಶದಲ್ಲಿ ತಿಳಿಸಲಾಗಿದೆ.