ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬುವ ಮೊದಲೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಚಿಂತನೆ ನಡೆದಿದೆ. ಆರೋಪಗಳಿಗೆ ಗುರಿಯಾದ ಮತ್ತು ಕಾರ್ಯಕ್ಷಮತೆ ತೋರದ ಆರೇಳು ಮಂದಿ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡುವ ಕುರಿತಾಗಿ ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಹೊಸ ವರ್ಷದಲ್ಲಿ ಹೊಸ ಸಚಿವರ ತಂಡದೊಂದಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಸರ್ಕಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಗಿತ ವ್ಯಕ್ತಪಡಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಎಂ, ಈ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಸಚಿವ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ. ವರಿಷ್ಠರು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಎರಡು ವರ್ಷ ತುಂಬುವುದರೊಳಗೆ ಸಚಿವ ಸಂಪುಟ ಪುನಾರಚನೆ ಮಾಡಬೇಕೆಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ. ಸಂಕ್ರಾಂತಿ ವೇಳೆಗೆ ಕೆಲವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು ಸಣ್ಣ ಪ್ರಮಾಣದಲ್ಲಿ ಸಂಪುಟ ಸರ್ಜರಿಗೆ ಚಿಂತನೆ ಕೂಡ ನಡೆದಿದೆ ಎಂದು ಹೇಳಲಾಗಿದೆ.