
ಎಂಟು ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಉತ್ತರ ಕೆರೊಲಿನಾದ ಹೊರ ವಲಯದಲ್ಲಿ ಸಾಗರದಲ್ಲಿ ಬಿದ್ದಿದೆ. ನಾಪತ್ತೆಯಾದ ಪ್ರಯಾಣಿಕರಿಗಾಗಿ ಹುಡುಕಾಟ ನಡೆಸಿದ್ದು, ಒಬ್ಬರ ಮೃತದೇಹ ಪತ್ತೆಯಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ತಿಳಿಸಿದೆ.
ಒಂದು ಮೃತದೇಹವನ್ನು ಇಲ್ಲಿಯವರೆಗೆ ಪತ್ತೆ ಮಾಡಿ ಗುರುತಿಸಲಾಗಿದೆ ಎಂದು ಕಾರ್ಟೆರೆಟ್ ಕೌಂಟಿ ಶೆರಿಫ್ ಆಸಾ ಬಕ್ ತಿಳಿಸಿದರು. ಕುಟುಂಬದ ಗೌರವದಿಂದ ಮೃತದೇಹ ಕಂಡು ಬಂದ ವ್ಯಕ್ತಿಯ ವಯಸ್ಸು ಸೇರಿದಂತೆ ಆ ವ್ಯಕ್ತಿಯ ಹೆಸರು ಅಥವಾ ಇತರ ಜನರ ಬಗ್ಗೆ ಸದ್ಯಕ್ಕೆ ವಿವರಗಳನ್ನು ಬಿಡುಗಡೆ ಮಾಡಲು ಅವರು ನಿರಾಕರಿಸಿದರು. ಅವಘಡದಲ್ಲಿ ಯಾರೂ ಬದುಕುಳಿದಿರುವ ಬಗ್ಗೆ ನಮಗೆ ಯಾವುದೇ ಸೂಚನೆ ಇಲ್ಲ ಎಂದು ಶೆರಿಫ್ ಹೇಳಿದರು.
ಶೋಧನಾ ಸಿಬ್ಬಂದಿ ಇನ್ನೂ ವಿಮಾನದ ಅವಶೇಷ ಹುಡುಕುತ್ತಿದ್ದಾರೆ. ಉತ್ತರ ಕೆರೊಲಿನಾದಿಂದ ಅಟ್ಲಾಂಟಿಕ್ ಮಹಾಸಾಗರಕ್ಕೆ ದೂರದ ತೀರಕ್ಕೆ ಚಲಿಸುತ್ತಿದ್ದ ವಿಮಾನ ಸಮುದ್ರದಲ್ಲಿ ಪತನವಾಗಿದೆ. ವಿವಿಧ ಏಜೆನ್ಸಿಗಳ ಹಡಗುಗಳು ಶೋಧ ಕಾರ್ಯ ಮುಂದುವರೆಸುತ್ತಿವೆ ಎಂದು ಯುಎಸ್ ಕೋಸ್ಟ್ ಗಾರ್ಡ್ ಕ್ಯಾಪ್ಟನ್ ಮ್ಯಾಥ್ಯೂ ಜೆ ಬೇರ್ ಸುದ್ದಿಗಾರರಿಗೆ ತಿಳಿಸಿದರು.
ವಿಮಾನದ ಪ್ರಯಾಣಿಕರ ಕುಟುಂಬದ ಹೆಚ್ಚಿನ ಸದಸ್ಯರು ಕಾರ್ಟೆರೆಟ್‌ನಲ್ಲಿ ವಾಸಿಸುತ್ತಿದ್ದಾರೆ, ಇದು ಸುಮಾರು 70,000 ಜನರ ಕರಾವಳಿ ಕೌಂಟಿಯಾಗಿದೆ. ನಾವು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.