ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಪೊಲೀಸರು, ಪೈಲಟ್ ಒಬ್ಬರನ್ನ ಪ್ರಾಣಾಪಾಯದಿಂದ ಕಾಪಾಡಿದ್ದಾರೆ. ಭಾನುವಾರ ಈ ಘಟನೆ ನಡೆದಿದೆ. ರೈಲು ಹಳಿಗಳ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿದ್ದ ವಿಮಾನಕ್ಕೆ ರೈಲು ಗುದ್ದಿದರೂ ಪೊಲೀಸರ ಸಹಾಯದಿಂದ ಪೈಲಟ್ ಸಾವಿನಂಚಿನಿಂದ ಜೀವಂತವಾಗಿ ಪಾರಾಗಿದ್ದಾರೆ.
ಪಕೋಯಿಮಾ ನೆರೆಹೊರೆಯಲ್ಲಿ ವಿಫಲ ಟೇಕ್ ಆಫ್ ಕಂಡ ವಿಮಾನ ಸ್ವಲ್ಪ ಸಮಯದ ನಂತರ ರೈಲು ಹಳಿಗಳ ಮೇಲೆ ಕ್ರ್ಯಾಶ್ ಲ್ಯಾಂಡ್ ಆಗಿದೆ. ಆದರೆ ಪೊಲೀಸರ ಚಾಕಚಕ್ಯತೆ ಹಾಗೂ ಧೈರ್ಯದಿಂದ ಪೈಲಟ್ ಬದುಕುಳಿದಿದ್ದಾರೆ.
ರೈಲು ವಿಮಾನಕ್ಕೆ ಗುದ್ದುವ ಮೊದಲು ಪೊಲೀಸರು, ವಿಮಾನದಿಂದ ಪೈಲಟ್ ನನ್ನು ಹೊರಗೆಳೆದಿದ್ದಾರೆ. ಹಳಿಗಳಲ್ಲಿ ಹಾದುಹೋಗುವ ರೈಲು ವಿಮಾನವನ್ನು ಗುದ್ದಿದಾಗ ಪೊಲೀಸ್ ಅಧಿಕಾರಿಗಳು ಮತ್ತು ಪೈಲಟ್ ಹಳಿಗಳಿಂದ ಕೆಲವೇ ಅಡಿಗಳಷ್ಟು ದೂರದಲ್ಲಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಸಧ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಇತ್ತ ರೈಲಿನಲ್ಲಿದ್ದ ಸಿಬ್ಬಂದಿಗಾಗಲಿ, ಪ್ರಯಾಣಿಕರಿಗಾಗಲಿ ಈ ಘಟನೆಯಿಂದ ತೊಂದರೆಯಾಗಿಲ್ಲ ಎಂದು ತಿಳಿದು ಬಂದಿದೆ.
ಪೊಲೀಸ್ ಅಧಿಕಾರಿಗಳ ಬಾಡಿಕ್ಯಾಮ್ ನಲ್ಲಿ ಅವರ ರಕ್ಷಣಾ ಕಾರ್ಯಚರಣೆ ಸೆರೆಯಾಗಿದ್ದು, ವಿಮಾನದಿಂದ ರಕ್ತಸಿಕ್ತ ಪೈಲಟ್‌ನನ್ನು ಎಳೆಯುತ್ತಿರುವ ದೃಶ್ಯಗಳು ರೆಕಾರ್ಡ್ ಆಗಿವೆ. ಲಾಸ್ ಏಂಜಲೀಸ್ ನ ಪೊಲೀಸ್ ಇಲಾಖೆಯು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ತುಣಕನ್ನ ಪೋಸ್ಟ್ ಮಾಡಿದ, ತಮ್ಮ ಇಲಾಖೆ ಅಧಿಕಾರಿಗಳನ್ನು ಶ್ಲಾಘಿಸಿದೆ.