ದಿನದಲ್ಲಿ ಕೇವಲ 30-40 ನಿಮಿಷ ವ್ಯಾಯಾಮ ಮಾಡಿದ್ರೆ ಸಾಲದು. ತೂಕ ಇಳಿಸಿಕೊಳ್ಳುವುದು ಒಂದು ಯಜ್ಞ. ಮನಸ್ಸಿದ್ದಲ್ಲಿ ಮಾರ್ಗ. ಮೊದಲನೆಯದಾಗಿ ನಮ್ಮ ಜೀವನ ಶೈಲಿ ಬದಲಾಗಬೇಕಾಗುತ್ತದೆ. ಪ್ರತಿ ಗಂಟೆಯೂ ಮಹತ್ವ ಪಡೆಯುತ್ತದೆ.
ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ನಾವು ಮಾಡುವ ಎಲ್ಲ ಕೆಲಸವೂ ತೂಕದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಕಟ್ಟುನಿಟ್ಟಾಗಿ ಅಚ್ಚುಕಟ್ಟಾದ ದಿನಚರಿ ಪಾಲಿಸಬೇಕಾಗುತ್ತದೆ.
- ಮೊದಲನೆಯದಾಗಿ ಮಾಡುವ ಕೆಲಸ ಬೆಳಿಗ್ಗೆ ಆರು ಗಂಟೆಗೆ ಹಾಸಿಗೆಯಿಂದ ಏಳುವುದು. ಎದ್ದ ತಕ್ಷಣ ಒಂದು ಗ್ಲಾಸ್ ನೀರನ್ನು ಕುಡಿಯಿರಿ. ಇದು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಅಂಶವಿರುವ ಸ್ವಲ್ಪ ಆಹಾರವನ್ನು ಸೇವಿಸಿ. ಅರ್ಧ ಬಾಳೆಹಣ್ಣು ಅಥವಾ ಬದಾಮಿಯನ್ನು ನೀವು ಸೇವಿಸಬಹುದು. ನಂತ್ರ ಸ್ವಲ್ಪ ಸಮಯ ವ್ಯಾಯಾಮ ಮಾಡಿ. ಬೆಳಿಗ್ಗೆ ವ್ಯಾಯಾಮ ಮಾಡುವುದು ಬಹಳ ಒಳ್ಳೆಯದು. ಇದು ಚಯಾಪಚಯವನ್ನು ಸರಿಯಾಗಿಡುತ್ತದೆ. ಹಾಗೆ ಕ್ಯಾಲೋರಿ ಬರ್ನ್ ಮಾಡುತ್ತದೆ.
- ಬೆಳಿಗ್ಗೆ ಏಳು ಗಂಟೆಗೆ ಸ್ನಾನ ಮಾಡಿ ಉಪಹಾರ ಸೇವಿಸಿ. ಪ್ರೋಟೀನ್ ಮತ್ತು ಫೈಬರ್ ಇರುವ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
- ಬೆಳಿಗ್ಗೆ ಎಂಟು ಗಂಟೆಗೆ ನಿಮ್ಮ ಊಟವನ್ನು ಸಿದ್ಧಪಡಿಸಿ. ಕಡಿಮೆ ಕೊಬ್ಬಿರುವ ಪ್ರೋಟೀನ್,ಫೈಬರ್,ತಾಜಾ ತರಕಾರಿ ಸ್ವಲ್ಪ ಸಿಹಿ ಧಾನ್ಯ ಹಾಗೂ ಹಣ್ಣುಗಳು ನಿಮ್ಮ ಊಟದಲ್ಲಿ ಸೇರ್ಪಡೆಯಾಗಿರಲಿ.
- ಕಚೇರಿಗೆ ಹೋದ ತಕ್ಷಣ ನಿಮ್ಮ ಬಳಿ ನೀರಿನ ಬಾಟಲಿ ಇಟ್ಟುಕೊಳ್ಳುವುದನ್ನು ಮರೆಯಬೇಡಿ. ಆಗಾಗ ನೀರನ್ನು ಕುಡಿಯುತ್ತಿರಿ. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದಿಲ್ಲ. ಹಾಗೆ ಹಸಿವು ಬೇಗ ಆಗುವುದಿಲ್ಲ.
- ಬೆಳಿಗ್ಗೆ 10 ಗಂಟೆಗೆ ಫೈಬರ್ ಇರುವ ಆಹಾರ ಸೇವಿಸಿ. ಈ ಆಹಾರ 150 ಕ್ಯಾಲೋರಿಗಿಂತ ಹೆಚ್ಚಿರದಂತೆ ಗಮನ ಹರಿಸಿ.
- ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಲಸಕ್ಕೆ ಸ್ವಲ್ಪ ಬ್ರೇಕ್ ನೀಡಿ. ಕುರ್ಚಿಯಲ್ಲಿ ಕುಳಿತು ಮನಸ್ಸು ಬೇಸರಗೊಂಡಿರುತ್ತದೆ. ಹಾಗಾಗಿ ಕಚೇರಿಯಲ್ಲಿಯೇ ಸಣ್ಣದೊಂದು ಸುತ್ತು ಹಾಕಿ ಬನ್ನಿ. ಇಲ್ಲ ಕುಳಿತಲ್ಲಿಯೇ ಸಣ್ಣ ವ್ಯಾಯಾಮ ಮಾಡಿ.
- ಒಂದು ಗಂಟೆ ವೇಳೆಗೆ ಬೆಳಿಗ್ಗೆ ತಯಾರಿಸಿಕೊಂಡು ಬಂದ ಊಟವನ್ನು ಸೇವಿಸಿ. ಸರಿಯಾಗಿ ಅಗೆದು ತಿನ್ನಿ. ಜೊತೆಗೆ ಕಡಿಮೆ ಕ್ಯಾಲೋರಿಯ ಪಾನೀಯವನ್ನು ಸೇವಿಸಿ.
- ಎರಡು ಗಂಟೆ ಸುಮಾರಿಗೆ ಮತ್ತೆ ಕುರ್ಚಿಯಿಂದ ಎದ್ದು ಅಲ್ಲೆ ಸ್ವಲ್ಪ ವಾಕ್ ಮಾಡಿ. ಹಿಗೆ ಮಾಡುವುದರಿಂದ ನೀವು ತಿಂದ ಆಹಾರ ಜೀರ್ಣವಾಗಲು ಸಹಾಯವಾಗುತ್ತದೆ. ಕ್ಯಾಲೋರಿ ಬರ್ನ್ ಆಗುತ್ತದೆ.
- ಮೂರು ಗಂಟೆ ಸುಮಾರಿಗೆ ನೀವು ತಿಂದ ಊಟ ಜೀರ್ಣವಾಗಿರುತ್ತದೆ. ಹಾಗಾಗಿ 150 ಕ್ಯಾಲೋರಿ ಇರುವ ಸ್ನ್ಯಾಕ್ಸ್ ಸೇವಿಸಿ. ಸಿಹಿ ತಿಂಡಿ ಸೇವಿಸಿದ್ರೆ ಒಳ್ಳೆಯದು.
- ನಾಲ್ಕು ಗಂಟೆ ಹೊತ್ತಿಗೆ ಸ್ವಲ್ಪ ಗ್ರೀನ್ ಟೀ ಕುಡಿಯಿರಿ. ಇದು ಸುಸ್ತನ್ನು ಕಡಿಮೆ ಮಾಡುತ್ತದೆ. ಜೊತೆಗೆ ಚಯಾಪಚಯ ಶಕ್ತಿಯನ್ನು ಹೆಚ್ಚಿಸುತ್ತದೆ.
- ಕಚೇರಿ ಕೆಲಸ ಮುಗಿದ ನಂತ್ರ, ಕಚೇರಿ ಹತ್ತಿರವೇ ಇದ್ದಲ್ಲಿ ಸೈಕಲ್ ಅಥವಾ ನಡೆದು ಮನೆಗೆ ಬನ್ನಿ. ಇದರಿಂದ ದಣಿದ ದೇಹ ಉಲ್ಲಾಸಗೊಳ್ಳುತ್ತದೆ.
- ಮನೆಗೆ ಬಂದ ತಕ್ಷಣ ತರಕಾರಿ, ಕಡಿಮೆ ಕೊಬ್ಬಿನ ಪ್ರೋಟೀನ್ ಹಾಗೂ ಧಾನ್ಯಗಳ ಊಟ ಸಿದ್ಧಪಡಿಸಿ. ನೆನಪಿರಲಿ ಇದ್ರ ಕ್ಯಾಲೋರಿ 300 ಕ್ಕಿಂತ ಹೆಚ್ಚಿರದಿರಲಿ.
- ಸಂಜೆ ಏಳು ಗಂಟೆಗೆ ಬ್ರೆಷ್ ಮಾಡಿ. ಬ್ರೆಷ್ ಮಾಡಿದ ನಂತ್ರ ಬರುವ ಸುವಾಸನೆ ನಿಮ್ಮ ಹಸಿವನ್ನು ಕೆಲಕಾಲ ತಡೆಹಿಡಿಯುತ್ತದೆ.
- ರಾತ್ರಿ ಎಂಟು ಗಂಟೆಗೆ ಟಿವಿ ನೋಡುತ್ತಲೇ ನೀವು ಒತ್ತಡ ಕಡಿಮೆ ಮಾಡುವ ವ್ಯಾಯಾಮ ಮಾಡಬಹುದು. ನಂತ್ರ ತಯಾರಿಸಿಟ್ಟ ಊಟವನ್ನು ಸೇವಿಸಿ.
- ರಾತ್ರಿ 9 ಗಂಟೆಗೆ ಮರುದಿನದ ತಯಾರಿ ಮಾಡಿಕೊಳ್ಳಿ. ಕೆಲವೊಂದು ಯೋಗಾಸನಗಳನ್ನು ಮಾಡಿ. ಹಾಗೆ ಮಾಡಿದಲ್ಲಿ ನಿಮಗೆ ಬೇಗ ನಿದ್ದೆ ಬರುತ್ತದೆ.
- ಸರಿಯಾಗಿ 10 ಗಂಟೆಗೆ ನಿದ್ದೆ ಮಾಡಲು ಹೋಗಿ. ಒಳ್ಳೆಯ ಹಾಗೂ ಕೆಟ್ಟ ನಿದ್ದೆ ನಿಮ್ಮ ತೂಕ ಇಳಿಸಿಕೊಳ್ಳುವುದರಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ.