ಉದ್ಯಮಗಳಿಗೆ ಅಗತ್ಯವಿರುವ ಶಾಸನಾತ್ಮಕ ಅನುಮತಿಗಳನ್ನು ತ್ವರಿತವಾಗಿ ದೊರಕುವಂತೆ ಮಾಡಲು ಅನುವಾಗುವ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಗೆ (ಎನ್‌ಎಸ್‌ಡಬ್ಲ್ಯೂಎಸ್) ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯುಶ್ ಗೋಯಲ್ ಬುಧವಾರ ಚಾಲನೆ ನೀಡಿದ್ದಾರೆ.
ಹೊಸ ಪೋರ್ಟಲ್‌ನಿಂದಾಗಿ ಹೂಡಿಕೆದಾರರಿಗೆ ಅಗತ್ಯವಾದ ಅನುಮತಿಗಳನ್ನು ಪಡೆಯಲು ಸರ್ಕಾರೀ ಕಚೇರಿಗಳನ್ನು ಅಲೆಯುವುದರಿಂದ ಮುಕ್ತಿ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಕೇಂದ್ರದ ಈ ಹೆಜ್ಜೆಯಿಂದಾಗಿ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಉದ್ಯಮ ನಡೆಸುವ ಕಷ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆಯಿದೆ.
ಶೂಟೌಟ್ ಮತ್ತು ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಸೆರೆ
ಸದ್ಯದ ಮಟ್ಟಿಗೆ ಒಂಬತ್ತು ರಾಜ್ಯಗಳು ಹಾಗೂ 18 ಇಲಾಖೆಗಳು ಈ ಗವಾಕ್ಷಿ ವ್ಯವಸ್ಥೆಯೊಂದಿಗೆ ಕೈಜೋಡಿಸಿವೆ. ಮುಂಬರುವ ದಿನಗಳಲ್ಲಿ ಇನ್ನೂ 14 ಇಲಾಖೆಗಳು ಹಾಗೂ ಐದು ರಾಜ್ಯಗಳು ಈ ವ್ಯವಸ್ಥೆಯೊಂದಿಗೆ ಬೆಸೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಉದ್ಯಮ ನಡೆಸಲು ಅಗತ್ಯವಿರುವ ಶಾಸನಾತ್ಮಕ ಪ್ರಕ್ರಿಯೆಗಳ ಮಾಹಿತಿಗಳೆಲ್ಲವನ್ನೂ ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಕೊಡಮಾಡುವ ಈ ಹೊಸ ವ್ಯವಸ್ಥೆಯಿಂದಾಗಿ ಪಾರದರ್ಶಕತೆ, ಹೊಣೆಗಾರಿಕೆ ಹಾಗೂ ಪ್ರತಿಕ್ರಿಯಾಶೀಲತೆ ವರ್ಧನೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ ಗೋಯೆಲ್.
http://www.nsws.gov.in/. ಪೋರ್ಟಲ್‌ಗೆ ಭೇಟಿ ಕೊಡುವ ಮೂಲಕ ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೂಡಿಕೆದಾರರು ಅಕ್ಸೆಸ್ ಮಾಡಬಹುದಾಗಿದೆ. ಈ ಪೋರ್ಟಲ್‌ನಲ್ಲಿ ಹೂಡಿಕೆದಾರರು ಒಂದೇ ಡ್ಯಾಶ್‌ಬೋರ್ಡ್ ಮೂಲಕ ಅರ್ಜಿ ಸಲ್ಲಿಸುವುದು, ಅರ್ಜಿಗಳನ್ನು ಟ್ರ‍್ಯಾಕ್ ಮಾಡುವುದು ಹಾಗೂ ತಮ್ಮ ಕ್ವೈರಿಗಳಿಗೆ ಪರಿಹಾರಗಳನ್ನು ಪಡೆಯಬಹುದಾಗಿದೆ.