
ಬೆಂಗಳೂರು: ಪೀಣ್ಯ ಫ್ಲೈಓವರ್ ಮೇಲೆ ಜುಲೈ 29ರಿಂದ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಸಿದ್ಧತೆ ನಡೆಸಲಾಗಿದೆ. ಈ ನಡುವೆ ವಾಹನ ಸವಾರರ ಸ್ಪೀಡ್ ಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಜುಲೈ 29ರಿಂದ ಪೀಣ್ಯ ಫ್ಲೈಓವರ್ ಮೇಲೆ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದೆ. ಐಐಎಸ್ ಸಿ ಅಧ್ಯಯನದ ಬಳಿಕ ಘನ ವಾಹನ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಸಂಚಾರ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ವಾಹನ ಸವಾರರಿಗೆ ಕೆಲ ಷರತ್ತುಗಳನ್ನು ಅನುಸರಿಸಲು ಸೂಚಿಸಲಾಗಿದೆ.
ಪೀಣ್ಯ ಫ್ಲೈಓವರ್ ಮೇಲೆ ಸಂಚಾರ ಮಾಡುವ ವಾಹನಗಳು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸಬೇಕು. ಹೆಚ್ಚು ಸ್ಪೀಡ್ ನಲ್ಲಿ ವಾಹನ ಓಡಾಟ ನಡೆಸಿದರೆ ವೈಬ್ರೇಷನ್ ನಿಂದ ಕಾಮಗಾರಿಗೆ ಅಡಚಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಸ್ಪೀಡ್ ಲಿಮಿಟ್ ಅಳವಡಿಸಲಾಗಿದೆ.
ಇನ್ನು ವಾರದಲ್ಲಿ ಒಂದು ದಿನ ಅಂದರೆ ಪ್ರತಿ ಶುಕ್ರವಾರ ಘನ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಪೀಣ್ಯ ಫ್ಲೈಓವರ್ ಮೇಲೆ ಘನ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಹನ ಸವಾರರು ಬೆಂಗಳೂರಿಗೆ ಬರಲು ಬದಲಿ ಮಾರ್ಗವಾಗಿ ಫ್ಲೈಓವರ್ ಎಡಪಥದಲ್ಲಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.