
ಆಲ್ಕೋಹಾಲ್‌ನ ನಿಯಂತ್ರಿತ ಸೇವನೆಯಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಆಗಾಗ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಹಿಂದಿನ ರಾತ್ರಿ ನಿದ್ರೆ ಕಡಿಮೆಯಾಗಿ ತಲೆನೋವು ಬಂದಿದ್ದರೆ ಆಲ್ಕೋಹಾಲ್ ಭಾರೀ ಉಪಯೋಗಕ್ಕೆ ಬರುತ್ತದೆ ಎಂಬ ಮಾತುಗಳಿವೆ.
ಇದೇ ರೀತಿ ಬಿಯರ್ ಹೀರುವುದರಿಂದಲೂ ಸಹ ಆರೋಗ್ಯಕ್ಕೆ ಭಾರೀ ಲಾಭಗಳಿವೆ ಎಂಬ ಮಾತುಗಳು ಕೇಳಿ ಬರುತ್ತಲೇ ಇವೆ. ವಾರದ ಪ್ರತಿನಿತ್ಯವೂ ಒಂದು ಪಿಂಟ್ ಬಿಯರ್ ಸೇವನೆಯಿಂದ ಹೃದ್ರೋಗ ಸಂಬಂಧಿ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸುತ್ತಿದೆ.
ವಾಷಿಂಗ್ಟನ್ ವಿಶ್ವಿದ್ಯಾಲಯದ ಆರೋಗ್ಯ ವಿಭಾಗದ ಹಿರಿಯ ನಿರ್ದೇಶಕರಲ್ಲೊಬ್ಬರಾದ ಎಮ್ಯಾನ್ಯುಯೆಲಾ ಗಾಕಿಡು ಈ ಬಗ್ಗೆ ಅಧ್ಯಯನ ಮಾಡಿದ್ದಾರೆ. “ಅದಾಗಲೇ ಹೃದ್ರೋಗ ಇರುವ ಮಂದಿ ಇನ್ನಷ್ಟು ಹೃದಯಾಘಾತ, ಸ್ಟ್ರೋಕ್ ಆಗದಂತೆ ಮಾಡಲು ಕುಡಿಯುವುದನ್ನ ಬಿಡಬೇಕಾದ ಅಗತ್ಯವಿಲ್ಲ. ಬದಲಾಗಿ ಅವರು ವಾರದಲ್ಲಿ ಸೇವಿಸುವ ಆಲ್ಕೋಹಾಲ್ ಪ್ರಮಾಣವನ್ನು ತಗ್ಗಿಸಬೇಕು,” ಎಂದಿದ್ದಾರೆ.
ಲಂಡನ್‌ನ ಯೂನಿವರ್ಸಿಟಿ ಕಾಲೇಜಿನ ತಜ್ಞರ ಪ್ರಕಾರ ವಾರಕ್ಕೆ 105 ಗ್ರಾಂ ಆಲ್ಕೋಹಾಲ್ ಸೇವನೆಯಿಂದ ಹೃದಯಾಘಾತದ ರಿಸ್ಕ್ ಕಡಿಮೆಯಾಗುತ್ತದೆ.
ಬ್ರಿಟನ್‌ನ ಯುಕೆ ಬಯೋಬ್ಯಾಂಕ್, ಇಂಗ್ಲೆಂಡ್ ಆರೋಗ್ಯ ಸರ್ವೇ, ಸ್ಕಾಟಿಶ್ ಆರೋಗ್ಯ ಸರ್ವೇಗಳಿಂದ ಹೃದ್ರೋಗ ಇರುವ 48,423 ಮಂದಿಯ ದತ್ತಾಂಶಗಳನ್ನು ಸಂಗ್ರಹಿಸಿ ಈ ಅಧ್ಯಯನ ಮಾಡಲಾಗಿದೆ. ಪ್ರತಿನಿತ್ಯ 62 ಗ್ರಾಂನಷ್ಟು ಆಲ್ಕೋಹಾಲ್ ಸೇವನೆಯಿಂದ ಹೃದಯಾಘಾತದ ರಿಸ್ಕ್ ಹೆಚ್ಚಾಗುವುದಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ಇಷ್ಟೆಲ್ಲಾ ಆದರೂ ಸಹ, ಕುಡಿತದ ಅಭ್ಯಾಸ ಇಲ್ಲದಿರುವ ಮಂದಿಗೆ ಕುಡಿಯಲು ಉತ್ತೇಜನ ನೀಡಲು ಈ ಅಧ್ಯಯನ ಪ್ರೇರಣೆಯಲ್ಲ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.