ಕೊಲಂಬಿಯಾದ ವಾಯುಪಡೆಯ ಎರಡು ಯುದ್ಧ ವಿಮಾನಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ ಘಟನೆ ಶನಿವಾರ ಅಪಿಯಾಯ್ ಏರ್ ಬೇಸ್‌ನಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡು ವೈರಲ್ ಆಗಿದೆ.
ಎರಡೂ ವಿಮಾನಗಳು ಮಧ್ಯ ಕೊಲಂಬಿಯಾದ ಮೆಟಾದ ಅಪಿಯಾಯ್ ಏರ್ ಬೇಸ್‌ನಲ್ಲಿ ತರಬೇತಿಯಲ್ಲಿದ್ದಾಗ ಈ ದುರಂತ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ರೇಡಿಯೊ ನೆಟ್‌ವರ್ಕ್ ಡಬ್ಲ್ಯೂ ರೇಡಿಯೊ ಕೊಲಂಬಿಯಾ ವರದಿ ಮಾಡಿದೆ.
ದೇಶದ ವಾಯುಪಡೆ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮಾರಣಾಂತಿಕ ಅಪಘಾತದಲ್ಲಿ ಕನಿಷ್ಠ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.
ಟ್ರೇನಿಂಗ್ ಮಿಷನ್‌ನಲ್ಲಿ ಎರಡು T-27 ಟುಕಾನೊ ವಿಮಾನಗಳು 2 ನೇ ಏರ್ ಕಾಂಬ್ಯಾಟ್ ಕಮಾಂಡ್‌ನಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ. ಪೈಲಟ್‌ಗಳು ಸಾಯುವುದಿಲ್ಲ, ಅವರು ಎತ್ತರಕ್ಕೆ ಹಾರುತ್ತಾರೆ ಎಂದು ಕೊಲಂಬಿಯಾದ ವಾಯುಪಡೆ ಟ್ವೀಟ್ ಮಾಡಿದೆ.