ಕೊರೊನಾ ಕಂಟಕ 2 ವರ್ಷದ ನಂತರ ಕೊನೆಗೊಳ್ಳುತ್ತಾ ಬಂದಿದೆ. ಈಗ ಮತ್ತೆ ಜೀವನ ಯಥಾ ಪ್ರಕಾರ ಎಲ್ಲವೂ ಮೊದಲಿನಂತಾಗುತ್ತಿದೆ. ಈಗ ಚಾರ್ ಧಾಮ್ ಯಾತ್ರೆಯನ್ನ ಮತ್ತೆ ಪುನರಾರಂಭಿಸಲಾಗಿದೆ. ಭಕ್ತಾದಿಗಳು ಮತ್ತೆ ತೀರ್ಥಯಾತ್ರೆ ಮಾಡಬಹುದು ಅನ್ನೋ ಸಂಭ್ರಮದಲ್ಲಿದ್ದಾರೆ. ಅದೇ ರೀತಿ ವ್ಯಾಪಾರಿಗಳು ಸಹ ಮತ್ತೆ ವ್ಯಾಪಾರ ಭರ್ಜರಿಯಾಗಿ ನಡೆಯಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಆದರೆ ಈಗ ಅದೇ ಕ್ಷೇತ್ರಗಳು ಸಮಸ್ಯೆಗಳ ಆಗರವಾಗುತ್ತಿದೆ.
ಕೇದಾರನಾಥ, ಬದರಿನಾಥ, ಗಂಗೋತ್ರಿ ಹಾಗೂ ಯಮುನೋತ್ರಿ ಈ ನಾಲ್ಕು ಧಾಮಗಳಿಗೆ ಬರುವ ಭಕ್ತಾದಿಗಳು ಸಂಖ್ಯೆ ಒಮ್ಮಿಂದೊಮ್ಮೆಲೆ ಏರಿಕೆಯಾಗಿದೆ. ಇಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸಬಹುದು ಅನ್ನೊ ಅಂದಾಜು ಆಡಳಿತ ವರ್ಗದವರಿಗಾಗಲಿ, ಇಲ್ಲಿನ ಪೊಲೀಸರಿಗಾಗಲಿ ಇರಲೇ ಇಲ್ಲ. ಇದರಿಂದ ಅನೇಕ ಸಮಸ್ಯೆಗಳು ಎದುರಿಸೋ ಹಾಗಾಗಿದೆ.
ಭಕ್ತರ ನೂಕು ನುಗ್ಗಲು ಹೆಚ್ಚುತ್ತಲೇ ಹೋಗುತ್ತಿದೆ. ಈಗಾಗಲೇ ಕೇದಾರನಾಥದಲ್ಲಿ 12,000, ಬದ್ರಿನಾಥ್ ನಲ್ಲಿ 15,000, ಗಂಗೋತ್ರಿ 7,000 ಯಮುನೋತ್ರಿ 4,000 ಇಷ್ಟೆ ಭಕ್ತರನ್ನ ದೇವರ ದರ್ಶನಕ್ಕೆಂದು ಅನುಮತಿ ಕೊಟ್ಟಿರೋದು. ಆದರೆ ಈಗ ಇಲ್ಲಿ ಅಂದಾಜಿಗೂ ಮೀರಿ ಭಕ್ತರ ಆಗಮನವಾಗುತ್ತಲೇ ಇದೆ.
ಇದರಿಂದ ಪರಿಸ್ಥಿತಿಯನ್ನ ನಿಭಾಯಿಸೋದು ಆಡಳಿತ ಮಂಡಳಿಗೆ ಕಷ್ಟವಾಗಿದೆ. ಅದರಲ್ಲೂ ರಿಜಿಸ್ಟರ್ ಮಾಡಿರೋ ಭಕ್ತರಿಗಿಂತ ರಿಜಿಸ್ಟರ್ ಮಾಡದೇ ಬರುವ ಭಕ್ತರ ಸಂಖ್ಯೆಯೇ ಅಧಿಕವಾಗಿದೆ. ಒಟ್ಟಿನಲ್ಲಿ ಸಾಗರೋಪಾದಿಯಲ್ಲಿ ಬಂದು ದೇವರ ದರ್ಶನ ಮಾಡುತ್ತಿದ್ದಾರೆ.