ಹಾವೇರಿ: ರೈತರಿಗೆ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಕೇರಳದ ರೀತಿಯಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಗೆ ಹೋಗಲು ಗಂಭೀರ ಚಿಂತನೆ ನಡೆಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಸಚಿವರು, ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಸೆಪ್ಟಂಬರ್ ನಲ್ಲಿ ಕೇಂದ್ರಕ್ಕೆ ಪತ್ರ ಬರೆದು ಅನುದಾನ ನೀಡಲು ಕೋರಲಾಗಿತ್ತು. ನವೆಂಬರ್ ನಲ್ಲಿ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿ ಪರಿಹಾರ ಬಿಡುಗಡೆಗೆ ವರದಿ ಸಲ್ಲಿಸುವುದಾಗಿ ಹೇಳಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಪ್ರಮುಖ ಮಂತ್ರಿಗಳು ದೆಹಲಿಗೆ ತೆರಳಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಅನುದಾನಕ್ಕೆ ಮನವಿ ಮಾಡಿದ್ದರೂ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ ಪಿಐಎಲ್ ಹಾಕಲು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.