
2019 ರ ಆರಂಭದಿಂದ ಚಂದ್ರನ ದೂರದ ಭಾಗವನ್ನು ಅನ್ವೇಷಿಸುತ್ತಿರುವ ಚೀನಾದ ಯುಟು -2 ರೋವರ್ ಅನ್ನು ಇತ್ತೀಚೆಗೆ ಉತ್ತರ ದಿಗಂತದಲ್ಲಿ ಗುರುತಿಸಲಾದ ನಿಗೂಢ ಘನಾಕಾರದ ವಸ್ತುವಿನ ತನಿಖೆಗೆ ಕಳುಹಿಸಲಾಗಿದೆ.
ಚೀನಾದ ಬಾಹ್ಯಾಕಾಶ ಕಾರ್ಯಕ್ರಮವನ್ನು ವರದಿ ಮಾಡುವ ಪತ್ರಕರ್ತ ಆಂಡ್ರ್ಯೂ ಜೋನ್ಸ್ ಎಂಬುವವರು ಶುಕ್ರವಾರ ಸರಣಿ ಟ್ವೀಟ್‌ಗಳ ಮೂಲಕ ರೋವರ್ ನವೀಕರಣಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ, ಯುಟು-2 ಉತ್ತರ ದಿಗಂತದಲ್ಲಿ ಘನ ಆಕಾರದ ವಸ್ತುವಿನ ಚಿತ್ರವನ್ನು ಸೆರೆಹಿಡಿದಿದೆ, ಅದು ವಾನ್ ಕಾರ್ಮನ್ ಕುಳಿಯಲ್ಲಿ ರೋವರ್‌ನಿಂದ 80 ಮೀ ದೂರದಲ್ಲಿದೆ ಎಂದು ಅವರು ಬರೆದಿದ್ದಾರೆ.
ನಂತರದ ಟ್ವೀಟ್‌ನಲ್ಲಿ, ಒಂದು ಮೊನಚಾದ ಕಲ್ಲಿನ ಕಂಬದಂತೆ ಕಂಡುಬಂದಿದೆ. ಆದರೆ, ಇದು ಒಬೆಲಿಸ್ಕ್ ಅಥವಾ ಅನ್ಯಗ್ರಹ ಜೀವಿಯಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಲ್ಯಾಂಡಿಂಗ್ ಸೈಟ್‌ನಿಂದ ಈಶಾನ್ಯಕ್ಕೆ ದಾರಿ ಮಾಡುವಾಗ ರೋವರ್ ಮತ್ತು ಡ್ರೈವ್ ತಂಡವು ಕುಳಿಗಳ ನಡುವೆ ಹೇಗೆ ನ್ಯಾವಿಗೇಟ್ ಮಾಡಿದೆ ಎಂಬುದನ್ನು ವಿವರಿಸಿದ್ದಾರೆ.
ವರದಿಗಳ ಪ್ರಕಾರ, ಫೋಟೋಗಳನ್ನು ತೆಗೆದಾಗ ಯುಟು-2 ಘನಾಕಾರದ ವಸ್ತುವಿನಿಂದ ಸುಮಾರು 80 ಮೀಟರ್ ದೂರದಲ್ಲಿತ್ತು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ರೋವರ್ ಹತ್ತಿರವಾಗುತ್ತಿದ್ದಂತೆ, ವಸ್ತುವಿನ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ತಜ್ಞರಿಗೆ ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಚಂದ್ರನ ಮೇಲ್ಮೈನಲ್ಲಿ ಕುಳಿಗಳಿರುವುದರಿಂದ ಅನೇಕರು ಅದು ಬಂಡೆಯಾಗಿರಬಹುದು ಎಂದು ಊಹಿಸಿದ್ದಾರೆ.
2019 ರಿಂದ ಯುಟು-2 ರೋವರ್ ಕಂಡುಹಿಡಿದ ವಿಚಿತ್ರ ಸಂಗತಿಯೇನಲ್ಲ. ಮೊದಲಿಗೆ ಈ ರೋವರ್ ಚಂದ್ರನ ಮೇಲೆ ಕಾಲಿಟ್ಟಾಗ ಕುಳಿಯ ಕೆಳಭಾಗದಲ್ಲಿ ಜೆಲ್ ತರಹದ ವಸ್ತುವನ್ನು ಕಂಡುಹಿಡಿದಿತ್ತು. ಬಳಿಕ ಅದು ಬಂಡೆ ಎಂದು ತಿಳಿದುಬಂತು.
ಯುಟು-2 ರೋವರ್ 2019 ರಲ್ಲಿ ಚಾಂಗ್-4 ಲ್ಯಾಂಡರ್ ಅನ್ನು ಬಳಸಿಕೊಂಡು ಚಂದ್ರನಲ್ಲಿ ಲ್ಯಾಂಡಿಂಗ್ ಮಾಡಿದೆ.