ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಪಿಕ್ ಪಾಕೆಟ್ ಗಳು ಎಂದು ಕರೆದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಭಾಷಣವು ಉತ್ತಮ ಅಭಿರುಚಿಯನ್ನು ಹೊಂದಿಲ್ಲ ಎಂದು ಗಮನಿಸಿದ ದೆಹಲಿ ಹೈಕೋರ್ಟ್, ಎಂಟು ವಾರಗಳಲ್ಲಿ ಅವರ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ.
ಕಾಂಗ್ರೆಸ್ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ರಾಜಕೀಯ ನಾಯಕರ ಇಂತಹ ದುಷ್ಕೃತ್ಯವನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರನ್ನೊಳಗೊಂಡ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ನವೆಂಬರ್ 22 ರಂದು ಭಾಷಣ ಮಾಡುವಾಗ ಕಾಂಗ್ರೆಸ್ ನಾಯಕ ಪ್ರಧಾನಿ ಸೇರಿದಂತೆ “ಅತ್ಯುನ್ನತ ಸರ್ಕಾರಿ ಹುದ್ದೆಗಳನ್ನು” ಹೊಂದಿರುವ ವ್ಯಕ್ತಿಗಳ ವಿರುದ್ಧ “ಘೋರ ಆರೋಪಗಳನ್ನು” ಮಾಡಿದ್ದಾರೆ ಮತ್ತು ಅವರನ್ನು “ಪಿಕ್ ಪಾಕೆಟ್” ಎಂದು ಉಲ್ಲೇಖಿಸಿದ್ದಾರೆ ಎಂದು ಅರ್ಜಿದಾರರಾದ ಭರತ್ ನಗರ್ ಹೈಕೋರ್ಟ್ ಗೆ ತಿಳಿಸಿದ್ದಾರೆ. ಪ್ರಧಾನಿ ಮೋದಿಯನ್ನು ‘ಪನೌತಿ’ ಎಂದು ಕರೆದ ರಾಹುಲ್ ಗಾಂಧಿ ಅವರ ಭಾಷಣವನ್ನು ಪಿಐಎಲ್ ಉಲ್ಲೇಖಿಸಿದೆ.