ಚಾರ್ಜ್ ಆಗುತ್ತಿರುವಾಗ ಮೊಬೈಲ್ ಸಾಧನಗಳು ಸ್ಫೋಟಗೊಳ್ಳುವ ಅಥವಾ ಇದ್ದಕ್ಕಿದ್ದಂತೆ ಬೆಂಕಿ ಹಿಡಿಯುವ ಪ್ರಕರಣಗಳನ್ನು ನಾವೆಲ್ಲರೂ ಕೇಳಿದ್ದೇವೆ. ಹಾಗೇ ನಿಮ್ಮ ಜೊತೆ ಆಗಬಾರದೆಂದರೆ ಈ ಸುದ್ದಿ ಓದಿ.
ತಮ್ಮ ಮೊಬೈಲ್ ಸಾಧನಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ಚಾರ್ಜ್ ಗೆ ಹಾಕಿ ಹಾಸಿಗೆ ಮೇಲಿಟ್ಟು ಮರೆಯುವವರಿಗೆ ಈ ಸುದ್ದಿ ಎಚ್ಚರಿಕೆ ಘಂಟೆ. ಕಪ್ಪುಗೊಂಡ ಚಾರ್ಜರ್‌ನ ಸೀಸದ ತುದಿ ಹಾಗೂ ಸುಟ್ಟ ಬೆಡ್‌ಶೀಟ್, ಸುಟ್ಟಂತೆ ಕಪ್ಪಿಟ್ಟಿರುವ ಚಾರ್ಜಿಂಗ್ ವೈಯರ್ ಅದರ ರಕ್ಷಣಾತ್ಮಕ ಲೇಪನ ಕರಗಿ ಬೆಡ್ ಶೀಟ್ ಅನ್ನ ಸುಟ್ಟು ಹಾಕಿದೆ. ಈ ಫೋಟೊಗಳನ್ನ ಆಸ್ಟ್ರೇಲಿಯನ್ ಅಗ್ನಿಶಾಮಕ ಇಲಾಖೆಯು ಆನ್‌ಲೈನ್‌ನಲ್ಲಿ ಹಂಚಿಕೊಂಡು ಮುಖ್ಯ ಸಂದೇಶ ನೀಡಿದೆ.
ನಿಮ್ಮ ಮಕ್ಕಳು ಕ್ರಿಸ್‌ಮಸ್‌ಗಾಗಿ ಟ್ಯಾಬ್ಲೆಟ್ ಅಥವಾ ಫೋನ್ ಸ್ವೀಕರಿಸಿದ್ದಾರೆಯೇ ? ಅವರು ಹಾಸಿಗೆಯಲ್ಲಿ ಎಲೆಕ್ಟ್ರಾನಿಕ್ಸ್ ಅನ್ನು ಎಂದಿಗೂ ಚಾರ್ಜ್ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ ಎಂದು ಆಸ್ಟ್ರೇಲಿಯನ್ ಅಗ್ನಿಶಾಮಕ ಇಲಾಖೆ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದೆ.
ಜೊತೆಗೆ ಮಾರ್ಗಸೂಚಿಗಳನ್ನು ಅನುಸರಿಸಲು ಮಕ್ಕಳಿಗೆ ಕಲಿಸಿ. ಸುತ್ತಲೂ ಸುಡುವ ವಸ್ತುಗಳಿಲ್ಲದ ಸಮತಟ್ಟಾದ ಮೇಲ್ಮೈಯಲ್ಲಿ ಚಾರ್ಜ್ ಮಾಡಿ, ಕನೆಕ್ಟರ್ ಅಥವಾ ಪ್ಲಗ್‌ನಲ್ಲಿ ಬೇರೆ ಯಾವುದೆ ವಸ್ತು ಸಿಕ್ಕಿಹಾಕಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಬೇರೆ ಯಾವುದೇ ಕೇಬಲ್ ಕಾರ್ಡ್ ಗಳಿಲ್ಲದ ಕಡೆ ಚಾರ್ಜ್ ಮಾಡಲು ಹೇಳಿಕೊಡಿ, “ಹಾನಿಗೊಳಗಾದ ಕೇಬಲ್ ಹಾಗೂ ಅಸುರಕ್ಷಿತ ಪರಿಸ್ಥಿತಿಗಳಲ್ಲಿ ಚಾರ್ಜ್ ಮಾಡುವುದು ವಿದ್ಯುದಾಘಾತ ಮತ್ತು ಬೆಂಕಿಯ ಅಪಾಯವನ್ನು ಉಂಟುಮಾಡಬಹುದು” ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಈ ಪೋಸ್ಟ್ ಗೆ ರಿಯಾಕ್ಟ್ ಮಾಡಿರುವ ಹಲವು ಮಂದಿ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ನಾನು ಇದರ ಬಗ್ಗೆ ನನ್ನ ಮಗಳಿಗೆ ಹೇಳಿದ್ದೇನೆ, ಈಗ ಅವಳು ಬೆಂಚ್‌ನಲ್ಲಿರುವ ಪೋರ್ಟಬಲ್ ಚಾರ್ಜರ್‌ನೊಂದಿಗೆ ಚಾರ್ಜ್ ಮಾಡುತ್ತಾಳೆ. ನನಗೀಗ ಒತ್ತಡ ಕಡಿಮೆಯಾಗಿ, ಸುರಕ್ಷಾ ಭಾವನೆ ಮೂಡಿದೆ ಎಂದು ಒಬ್ಬರು ಬರೆದಿದ್ದಾರೆ.
ನಾವು ಒಮ್ಮೆ ನಮ್ಮ ಮೇಜಿನ ಮೇಲಿದ್ದ ಪುಸ್ತಕದ ಮೇಲೆ ನಮ್ಮ ಫೋನ್ ಅನ್ನು ಚಾರ್ಜ್ ಗೆ ಹಾಕಿದ್ದೆವು. ಫೋನ್ ತುಂಬಾ ಬಿಸಿಯಾದ ಕಾರಣ ಪುಸ್ತಕಕ್ಕೆ ಬೆಂಕಿ ಹತ್ತಿಕೊಂಡಿತು. ದುರ್ವಾಸನೆಯಿಂದ ಎಚ್ಚರವಾಯಿತು ಎಂದು ಇನ್ನೊಬ್ಬ ಬಳಕೆದಾರರು ತಿಳಿಸಿದ್ದಾರೆ. ಫೋನ್ ಇರಲಿ ಅಥವಾ ಬೇರೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನ ಬಳಸುವಾಗ ಎಚ್ಚರಿಕೆಯಿಂದ ಇರಬೇಕು.