ಛಾಯಾಗ್ರಾಹಕರೊಬ್ಬರು ಇತ್ತೀಚೆಗೆ ಭೂಮಿಯ ತಿರುಗುವಿಕೆಯನ್ನು ತೋರಿಸುವ ಟೈಮ್‌ಲ್ಯಾಪ್ಸ್ ವಿಡಿಯೋ ಒಂದನ್ನು ಸೆರೆಹಿಡಿದಿದ್ದಾರೆ. ನಕ್ಷತ್ರ ವೀಕ್ಷಣೆಯನ್ನು ಇಷ್ಟಪಡುವವರು ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವ ವಿಡಿಯೋ ಇದಾಗಿದೆ.
ಛಾಯಾಗ್ರಾಹಕರು ಭೂಮಿಯ ತಿರುಗುವಿಕೆಯ ವಿಡಿಯೋವನ್ನು ಸೆರೆಹಿಡಿಯಲು ಗೈರೊಸ್ಕೋಪಿಕ್ ಕ್ಯಾಮೆರಾವನ್ನು ಬಳಸಿದ್ದಾರೆ. ಈ ವಿಡಿಯೋ ನೋಡಿದರೆ ಒಂದು ಅದ್ಭುತ ಲೋಕವನ್ನು ಸುತ್ತಿ ಬಂದ ಅನುಭವವಾಗುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಛಾಯಾಗ್ರಾಹಕ ಎರಿಕ್ ಬ್ರಮ್ಮೆಲ್ ಈ ವಿಡಿಯೋ ಸೆರೆ ಹಿಡಿದಿದ್ದಾರೆ. ಕ್ಷೀರಪಥದ ಮಬ್ಬು ನಕ್ಷತ್ರಗಳ ಸಂಪೂರ್ಣ ರಾತ್ರಿಯ ಆಕಾಶವನ್ನು ಇದರಲ್ಲಿ ಚಿತ್ರೀಕರಿಸಲಾಗಿದೆ. ಕ್ಷೀರಪಥ, ನಕ್ಷತ್ರಗಳಿಂದ ತುಂಬಿದ ಆಕಾಶ, ಶೂಟಿಂಗ್ ನಕ್ಷತ್ರಗಳು ಇಳಿಯುವುದು ಮತ್ತು ಹಿನ್ನೆಲೆಯಲ್ಲಿ ವಾಹನಗಳ ನೋಟವನ್ನು ಇದರಲ್ಲಿ ಕಾಣಬಹುದಾಗಿದೆ.
ವೀಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಕೂಡಲೇ ಟ್ವಿಟರ್ ಬಳಕೆದಾರರು ಮಾರುಹೋಗಿದ್ದಾರೆ. ಇಂಥ ಒಂದು ಅದ್ಭುತ ವಿಡಿಯೋ ಹಾಗೂ ಪರಿಕಲ್ಪನೆಯನ್ನು ತಮ್ಮ ಜೀವಮಾನದಲ್ಲಿ ನೋಡಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.