ಸಿಕ್ಕಿಂನ ಛಾಯಾಗ್ರಾಹಕನೊಬ್ಬ ಆಕಸ್ಮಿಕವಾಗಿ ಚಿಟ್ಟೆಯ ಹೊಸ ಪ್ರಭೇದವನ್ನು ಕಂಡುಹಿಡಿದಿದ್ದಾನೆ. ಚಿಟ್ಟೆಗಳ ಫೋಟೋಗಳನ್ನು ಕ್ಲಿಕ್ಕಿಸುವ ಹವ್ಯಾಸವಿರುವ ಸಿಕ್ಕಿಂನ ಸೋನಮ್ ವಾಂಗ್ಚುಕ್ ಲೆಪ್ಚಾ ಅವರು ಹೊಸ ಜಾತಿಯ ಚಿಟ್ಟೆಗಳನ್ನು ಕಂಡುಹಿಡಿದಿದ್ದಾರೆ.
ಸಿಕ್ಕಿಂನ ಝೋಂಗು ಮೂಲದ ಸೋನಂ ಅವರು 2016 ರಿಂದ ಚಿಟ್ಟೆಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ಅವರು ಕೀಟಗಳನ್ನು ಗುರುತಿಸಲು ಮತ್ತು ಅವುಗಳನ್ನು ಬಟರ್‌ಫ್ಲೈಸ್ ಆಫ್ ಇಂಡಿಯಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಫೋಟೋಗಳನ್ನು ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರಕ್ಕೆ ಕಳುಹಿಸುತ್ತಾರೆ.
2020ರಲ್ಲಿ ಸೋನಂ ಅವರು, ಕಂದು ಬಣ್ಣದ ಬಾರ್ಡರ್ ಹೊಂದಿರುವ ಹಳದಿ ಚಿಟ್ಟೆಯ ಫೋಟೋವನ್ನು ಕಳುಹಿಸಿದ್ದಾರೆ. ಈ ವೇಳೆ ಅದು ಅಜ್ಞಾತ ಜಾತಿಯೆಂದು ತಿಳಿದು ಬಂದಿದೆ. ಫೋಟೋವನ್ನು ಕೂಲಂಕುಶವಾಗಿ ಪರಿಶೀಲಿಸುವಾಗ, ಇದು ಭಾರತದಲ್ಲಿ ಈ ಹಿಂದೆ ಇಲ್ಲದ ಜಾತಿಯ ಚಿಟ್ಟೆಯಾಗಿದೆ. ಹಾಗೂ ಇದು ಹೊಸ ಜಾತಿಯಾಗಿರಬಹುದು ಅಂತಾ ಅಂದಾಜಿಸಲಾಗಿದೆ ಎಂದು ಎನ್‌ಸಿಬಿಎಸ್‌ನ ಕೃಷ್ಣಮೇಘ್ ಕುಂಟೆ ಹೇಳಿದ್ದಾರೆ.
ಇದೀಗ ಚಾಕೊಲೇಟ್-ಬಾರ್ಡರ್ಡ್ ಫ್ಲಿಟರ್ ಎಂದು ಹೆಸರಿಸಲಾದ ಹೊಸ ಜಾತಿಯ ಚಿಟ್ಟೆಯು, ಝೋಗ್ರಾಫೆಟಸ್ ಡಿಜೋಂಗ್ಯುಯೆನ್ಸಿಸ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ. ಉತ್ತರ ಸಿಕ್ಕಿಂನಲ್ಲಿರುವ ಝೋಂಗು ಸ್ಥಳದಲ್ಲಿ ಈ ಚಿಟ್ಟೆ ಪತ್ತೆಯಾದ್ದರಿಂದ ಈ ರೀತಿಯ ಹೆಸರಿಡಲಾಗಿದೆ.
ಝೂಟಾಕ್ಸಾ ಜರ್ನಲ್‌ನಲ್ಲಿ ಈ ಹೊಸ ಜಾತಿಯ ಚಿಟ್ಟೆಯ ಅಧ್ಯಯನವನ್ನು ಪ್ರಕಟಿಸಲಾಗಿದೆ. ಈ ಜಾತಿಗಳು ಸ್ಥಳೀಯವಾಗಿ ಕಂಡುಬರುತ್ತವೆ ಎಂದು ಪತ್ರಿಕೆಯಲ್ಲಿ ವಿವರಿಸಲಾಗಿದೆ.