ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಬೆತ್ತಲೆ ಫೋಟೋ ಕಳುಹಿಸುವಂತೆ ಬೆದರಿಕೆ ಹಾಕಿದ್ದರಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
23 ವರ್ಷದ ಯುವತಿಗೆ ಇನ್ಸ್ಟಾಗ್ರಾಂ ಖಾತೆ ಮೂಲಕ ಬ್ಲಾಕ್ಮೇಲ್ ಮಾಡಲಾಗಿತ್ತು. ಪದವಿ ಓದುತ್ತಿರುವ ವಿದ್ಯಾರ್ಥಿನಿ ಇನ್ಸ್ಟಾಗ್ರಾಂ ಖಾತೆ ಹೊಂದಿದ್ದು, ಇನ್ಸ್ಟಾಗ್ರಾಂ ಮೂಲಕ ವ್ಯಕ್ತಿಯೊಬ್ಬ ಪದೇ ಪದೇ ಕರೆ ಮಾಡಿ ನಿನ್ನ ಬೆತ್ತಲೆ ಫೋಟೋ ಕಳುಹಿಸು ಎಂದು ಒತ್ತಾಯಿಸಿದ್ದ. ಅಲ್ಲದೇ, ಫೋಟೋ ಕಳುಹಿಸಿದ್ದರೆ ತನ್ನಲ್ಲಿರುವ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾನೆ. ಇದರಿಂದ ಬೆದರಿದ ಯುವತಿ ವಿಡಿಯೋ ಕರೆ ಮಾಡಿ ಬೆತ್ತಲೆ ದೇಹ ತೋರಿಸಿದ್ದಾಳೆ. ಬಳಿಕ ಬೆತ್ತಲೆ ಫೋಟೋ ಹಾಕುವಂತೆ ಆತ ಒತ್ತಡ ಹೇರಿ ಬೆದರಿಕೆ ಹಾಕಿದ್ದಾನೆ.
ಅಪರಿಚಿತನ ಬೆದರಿಕೆ ಮತ್ತು ಕಿರುಕುಳ ಹೆಚ್ಚಾಗಿದ್ದರಿಂದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ಧೈರ್ಯ ಹೇಳಿ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದಾರೆ. ಈ ವೇಳೆ ರೂಮ್ ಗೆ ಹೋದ ಯುವತಿ ನೇಣು ಹಾಕಿಕೊಂಡಿದ್ದಾಳೆ. ಯುವತಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದರೂ ಈ ವೇಳೆಗೆ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.