ಭೋಪಾಲ್: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಹೆಲಿಪ್ಯಾಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪುಟ್ಟ ಮಗುವನ್ನು ಹಿಡಿದುಕೊಂಡಿರುವ ಫೋಟೋ ವೈರಲ್ ಆಗಿದ್ದು, ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ ಗಳಿಸಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಅಧಿಕಾರಿಯನ್ನು ಪ್ರಶಂಸಿಸಿದ್ದಾರೆ. ಹಾಗೂ ಟ್ವಿಟ್ಟರ್ ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಮೋನಿಕಾ ಸಿಂಗ್ ಎಂದು ಗುರುತಿಸಲಾಗಿರುವ ಅಧಿಕಾರಿಯನ್ನು ಧರ್ ಜಿಲ್ಲೆಯಲ್ಲಿ ಉಪ ಪೊಲೀಸ್ ಅಧೀಕ್ಷಕರಾಗಿ (ಡಿಎಸ್‌ಪಿ) ನೇಮಿಸಲಾಗಿದೆ. ಜೋಬತ್ ಅಸೆಂಬ್ಲಿ ಸೀಟಿಗೆ ಮುಂಬರುವ ಉಪಚುನಾವಣೆಯ ಎರಡು ದಿನಗಳ ಪ್ರಚಾರಕ್ಕಾಗಿ ಸಿಎಂ ಮಂಗಳವಾರ ಅಲಿರಾಜಪುರ ತಲುಪಿದ್ದಾರೆ. ಹೀಗಾಗಿ ಹೆಲಿಪ್ಯಾಡ್‌ನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ನಿಯೋಜಿಸಲಾಗಿತ್ತು.
“ನಾನು ಅಲಿರಾಜಪುರಕ್ಕೆ ಭೇಟಿ ನೀಡಿದಾಗ, ಡಿಎಸ್‌ಪಿ ಮೋನಿಕಾ ಸಿಂಗ್ ತನ್ನ ಒಂದೂವರೆ ವರ್ಷದ ಮಗಳನ್ನು ಬೇಬಿ ಕ್ಯಾರಿಯರ್ ಬ್ಯಾಗ್‌ನಲ್ಲಿ ಹಿಡಿದುಕೊಂಡಿರುವುದನ್ನು ನೋಡಿದೆ. ಕರ್ತವ್ಯದ ಕಡೆಗೆ ಅವರ ಸಮರ್ಪಣೆ ಶ್ಲಾಘನೀಯ. ಮಧ್ಯಪ್ರದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಆಕೆಯ ಪುಟ್ಟ ಮಗಳಿಗೆ ನನ್ನ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳನ್ನು ನಾನು ಬಯಸುತ್ತೇನೆ” ಎಂದು ಸಿಎಂ ಚೌಹಾಣ್ ಬುಧವಾರ ಟ್ವೀಟ್ ಮಾಡಿದ್ದಾರೆ. ಹಾಗೂ ಪೊಲೀಸ್ ಅಧಿಕಾರಿಯು ಮಗುವನ್ನು ಹಿಡಿದುಕೊಂಡಿರುವ ವಿಡಿಯೋ ಕ್ಲಿಪ್ ಅನ್ನು ಕೂಡ ಹಂಚಿಕೊಂಡಿದ್ದಾರೆ.
ಬುಧವಾರ ಸಿಎಂ ಹೆಲಿಕಾಪ್ಟರ್ ಹತ್ತುವ ಮೊದಲು, ತನ್ನ ಕ್ಯಾರಿಯರ್ ಬ್ಯಾಗ್‌ನಲ್ಲಿ ಕುಳಿತಿದ್ದ ಹೆಣ್ಣು ಮಗುವಿಗೆ ಅಶೀರ್ವಾದ ಮಾಡಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಪ್ರಸ್ತುತ ಧರ್ ಜಿಲ್ಲೆಯಲ್ಲಿ ನಿಯೋಜನೆಗೊಂಡಿರುವ ಮೋನಿಕಾ ಸಿಂಗ್, ಧರ್‌ನಿಂದ 145 ಕಿಮೀ ದೂರದಲ್ಲಿರುವ ಅಲಿರಾಜಪುರಕ್ಕೆ ಹೋಗಬೇಕಾಗಿತ್ತು. ಮಂಗಳವಾರ ಬೆಳಿಗ್ಗೆ ತನ್ನ ಕರ್ತವ್ಯಕ್ಕೆ ಹೊರಡುವಾಗ (ಅಲಿರಾಜಪುರದಲ್ಲಿ ಉಳಿದುಕೊಂಡಿದ್ದಾಗ) ಆಕೆಯ ಮಗಳು ಕೂಡ ಎಚ್ಚರಗೊಂಡು ಜೊತೆಗೆ ಕರೆದುಕೊಂಡು ಹೋಗುವಂತೆ ಅಳಲಾರಂಭಿಸಿದ್ದಾಳೆ. ಹೀಗಾಗಿ “ನಾನು ತಾಯಿಯಾಗಿ ಜವಾಬ್ದಾರಿಯನ್ನು ಪೂರೈಸಬೇಕಾಗಿತ್ತು ಮತ್ತು ನನ್ನ ಕರ್ತವ್ಯವನ್ನು (ಪೊಲೀಸ್ ಅಧಿಕಾರಿಯಾಗಿ) ಒಟ್ಟಿಗೆ ನಿರ್ವಹಿಸಬೇಕಾಗಿತ್ತು” ಎಂದು ಅವರು ಹೇಳಿದ್ದಾರೆ.