ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿ ಪತ್ನಿ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ವೈಯಕ್ತಿಕ ಫೋಟೋ ಹಾಗೂ ವಿಡಿಯೋ ಹಾಕಿ ಚಾರಿತ್ರ್ಯವಧೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ದೆಹಲಿ ಇಂಟಲಿಜೆನ್ಸ್ ಬ್ಯೂರೋ ಇನ್ಸ್ಪೆಕ್ಟರ್ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಯಲಹಂಕ ಬಾಬಾನಗರ ನಿವಾಸಿ 35 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಐಬಿ ಇನ್ಸ್ಪೆಕ್ಟರ್ ಶ್ರವಣಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
2006ರಲ್ಲಿ ಶ್ರವಣಕುಮಾರ್ ಮದುವೆಯಾಗಿದ್ದು, 13 ವರ್ಷದ ಪುತ್ರಿ ಇದ್ದಾಳೆ. ದಾಂಪತ್ಯದಲ್ಲಿ ಬಿರುಕು ಮೂಡಿ ಶ್ರವಣ್ ಕುಮಾರ್ ಡೈವೋರ್ಸ್ ಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ನ್ಯಾಯಾಲಯದಲ್ಲಿದ್ದರೂ ಪತಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನ್ನ ಹೆಸರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ವೈಯಕ್ತಿಕ ಫೋಟೋ, ವಿಡಿಯೋ ಪೋಸ್ಟ್ ಮಾಡಿ ಚಾರಿತ್ರ್ಯ ವಧೆ ಮಾಡಿದ್ದಾರೆ ಎಂದು ದೂರಿದ್ದಾರೆ.
2023ರ ಜುಲೈನಲ್ಲಿ ಬೆಂಗಳೂರಿಗೆ ಬಂದಿದ್ದ ಶ್ರವಣಕುಮಾರ್ ಗೊತ್ತಿಲ್ಲದಂತೆ ತಂಪು ಪಾನೀಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದರು. ಇದನ್ನು ವಿಡಿಯೋ ಮಾಡಿ ನಕಲಿ ಖಾತೆ ತೆರೆದು ಪೋಸ್ಟ್ ಹಾಕಿದ್ದಾರೆ. ತಂದೆ, ತಾಯಿ, ಪುತ್ರಿ ಹಾಗೂ ನನ್ನನ್ನು ಕೊಲೆ ಮಾಡುವುದಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.