ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ಆರೋಪ – ಪ್ರತ್ಯಾರೋಪ ಕೂಡ ಜೋರಾಗಿದೆ. ಈ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಕಳೆದ ಬಾರಿಯಂತೆ ಈ ಬಾರಿಯೂ ಸಹ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಪ್ರಯತ್ನ ನಡೆಸಿದೆ.
ಇದರ ಮಧ್ಯೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ – ಜೆಡಿಎಸ್ ಒಕ್ಕಲಿಗ ನಾಯಕರ ಜೊತೆ ನಿರ್ಮಲಾನಂದನಾಥ ಶ್ರೀಗಳ ಭೇಟಿ ಮಾಡಿದ್ದು, ಈ ವಿಚಾರ ಇದೀಗ ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಾವು ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲು ಕಾರಣರಾದವರ ಜೊತೆ ಎಚ್.ಡಿ. ಕುಮಾರಸ್ವಾಮಿ ಹೋಗಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇದೀಗ ರಾಜ್ಯ ಬಿಜೆಪಿ ವತಿಯಿಂದ ನಿರ್ಮಲಾನಂದನಾಥ ಶ್ರೀಗಳ ಫೋನ್ ಕದ್ದಾಲಿಕೆ ಪ್ರಕರಣ ಕುರಿತಂತೆ ಉಪ ಮುಖ್ಯಮಂತ್ರಿಯ ಡಿ.ಕೆ. ಶಿವಕುಮಾರ್ ವಿರುದ್ಧ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಡಾ. ಸಿ.ಎನ್. ಅಶ್ವಥ್ ನಾರಾಯಣ ನೇತೃತ್ವದಲ್ಲಿನ ಬಿಜೆಪಿ ನಿಯೋಗ ಈ ದೂರು ಸಲ್ಲಿಕೆ ಮಾಡಿದೆ.