ಕೊರೊನಾ ವೈರಸ್ ನಿಯಂತ್ರಣಕ್ಕೆ ಲಸಿಕೆ ದೊಡ್ಡ ಅಸ್ತ್ರ. ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷ್ಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದ್ರೆ ಇನ್ನೂ ಅನೇಕರು ಲಸಿಕೆ ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕ್ತಿರುವ ಜನರಿಗೆ ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡಟರ್ಟೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರನ್ನು ಜೈಲಿಗೆ ಕಳುಹಿಸುವುದಾಗಿ ರೊಡ್ರಿಗೋ ಹೇಳಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದೆ ಕೊರೊನಾ ವೈರಸ್ ಹರಡುತ್ತಿದ್ದರೆ ಅವರಿಗೆ ಕ್ಷಮೆ ಇಲ್ಲ. ನಾನು ನಿಮ್ಮನ್ನು ಜೈಲಿಗೆ ಹಾಕಬೇಕಾಗುತ್ತದೆ. ಲಸಿಕೆ ನಿರಾಕರಿಸಿದವರ ಪಟ್ಟಿಯನ್ನು ಗ್ರಾಮದ ಮುಖಂಡರು ಇಟ್ಟುಕೊಳ್ಳಬೇಕೆಂದು ಅವರು ಹೇಳಿದ್ದಾರೆ. ಸದ್ಯ ದೇಶವು ಗಂಭೀರ ಬಿಕ್ಕಟ್ಟಿನಲ್ಲಿದೆ. ಹಾಗಾಗಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮೊದಲ ಅಲೆ ಸಂಪನ್ಮೂಲದ ಮೇಲೆ ದೊಡ್ಡ ಪೆಟ್ಟು ನೀಡಿದೆ. ಇನ್ನೊಂದು ಅಲೆ ದೇಶಕ್ಕೆ ಹಾನಿಕಾರಕವಾಗಲಿದೆ. ಇದಕ್ಕೆ ಲಸಿಕೆ ಮದ್ದು ಎಂದು ರೊಡ್ರಿಗೋ ಹೇಳಿದ್ದಾರೆ.
ಫಿಲಿಪೈನ್ಸ್ ನಲ್ಲಿ ಕೊರೊನಾ ವೈರಸ್ ಗೆ ಇದುವರೆಗೆ 1.3 ದಶಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದಾರೆ. 23 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.