ಬೆಂಗಳೂರು: ಪೇಯಿಂಗ್ ಗೆಸ್ಟ್(ಪಿಜಿ)ಗಳಿಗೆ ಈಗಾಗಲೇ ನೀಡಲಾದ 10 ಅಂಶದ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 15ರೊಳಗೆ ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಬಿಬಿಎಂಪಿಯಿಂದ ನೀಡಲಾದ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿ ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ. ಮಾರ್ಗಸೂಚಿಯ 10 ಅಂಶಗಳನ್ನು ಹೊಸದಾಗಿ ಆರಂಭಿಸುವ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಪಿಜಿಗಳು ಪಾಲಿಸಬೇಕು. ಮಾರ್ಗಸೂಚಿಗಳಲ್ಲಿ ತಿಳಿಸಿದಂತೆ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಪ್ರತಿ ನಿವಾಸಿಗೆ ವಾಸಕ್ಕೆ ತಲಾ 70 ಚದರ ಆಡಿ ಕನಿಷ್ಠ ಜಾಗ, ಸ್ವಚ್ಛತೆ, ನೈರ್ಮಲ್ಯತೆ ಹೊಂದಿರುವ ಸ್ನಾನ ಗೃಹಗಳು, ಶೌಚಾಲಯಗಳು, ಶುದ್ಧ ಕುಡಿಯುವ ನೀರಿನ ಸೌಲಭ್ಯ ಸೇರಿ ಮೊದಲಾದ ಮಾರ್ಗಸೂಚಿಗಳನ್ನು ಸೆಪ್ಟೆಂಬರ್ 15ರೊಳಗೆ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ನಗರದಲ್ಲಿ ಸುಮಾರು 2000 ಪಿಜಿಗಳಿಗೆ ಪರವಾನಿಗೆ ನೀಡಿದ್ದು, ಸೆಪ್ಟೆಂಬರ್ 16 ರಿಂದ ಬಿಬಿಎಂಪಿ ವಲಯ ಆರೋಗ್ಯ ಅಧಿಕಾರಿಗಳು, ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳಿಗೆ ನೀಡಲಾದ ಉದ್ದಿಮೆ ಪರವಾನಿಗೆ ರದ್ದುಪಡಿಸಲಿದ್ದಾರೆ ಎಂದು ಹೇಳಲಾಗಿದೆ.