ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ತನ್ನ ಚಂದಾದಾರರಿಗೆ ಆನ್ಲೈನ್ ವಂಚನೆಯ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಭವಿಷ್ಯ ನಿಧಿ ಖಾತೆಗಳನ್ನು ಆನ್ಲೈನ್ ವಂಚನೆಗಳಿಂದ ರಕ್ಷಿಸಲು ಇಪಿಎಫ್ಓ ಕ್ರಮಗಳನ್ನು ತೆಗೆದುಕೊಂಡಿದ್ದು, ಗ್ರಾಹಕರಿಗೆ ಬೋಗಸ್ ಯೋಜನೆಗಳು ಮತ್ತು ವಂಚಕರ ವಿಚಾರವಾಗಿ ಜಾಗರೂಕರಾಗಿರಲು ಸಲಹೆ ನೀಡಿದೆ.
ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಯಾರಾದರೂ ತನ್ನ ಪ್ರತಿನಿಧಿ ಎಂದು ಹೇಳಿಕೊಂಡು ಅಗತ್ಯ ಮಾಹಿತಿಯನ್ನು ಕೇಳಿದಾಗ ಅವರೊಂದಿಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳದಂತೆ ಇಪಿಎಫ್ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ತನ್ನ ಸದಸ್ಯರನ್ನು ಎಚ್ಚರಿಸಿದೆ. ಆಧಾರ್, ಪಾನ್, ಯುಎಎನ್, ಬ್ಯಾಂಕ್ ಖಾತೆ ಅಥವಾ ಒಟಿಪಿಯಂತಹ ವೈಯಕ್ತಿಕ ಮಾಹಿತಿಯನ್ನು ಫೋನ್ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ತಾನು ಎಂದಿಗೂ ಕೇಳುವುದಿಲ್ಲ ಎಂದು ಇಪಿಎಫ್ಓ ಒತ್ತಿ ಹೇಳಿದೆ.
EPF ಡಿಜಿಟಲ್ ಆಗಿ ವರ್ಗಾಯಿಸಲು ಇಲ್ಲಿದೆ ಟಿಪ್ಸ್
ತನ್ನ ಸೇವೆಗಳಿಗೆ ಪ್ರತಿಯಾಗಿ ವಾಟ್ಸಾಪ್ ಅಥವಾ ಯಾವುದೇ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಸದಸ್ಯರಿಂದ ಹಣವನ್ನು ತಾನು ಎಂದಿಗೂ ವಿನಂತಿಸುವುದಿಲ್ಲ ಎಂದು ತಿಳಿದಿರಲಿ ಎಂದು ಎಚ್ಚರಿಸಿರುವ ಇಪಿಎಫ್ಒ; ಅಧಿಕಾರಿಗಳಂತೆ ಹೇಳಿಕೊಂಡು ಮಾಡುವ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದಂತೆ ಮತ್ತು ವೈಯಕ್ತಿಕ ಮಾಹಿತಿಯನ್ನು ನೀಡಲು ಅಥವಾ ಹಣವನ್ನು ಪಾವತಿ ಮಾಡದಂತೆ ತನ್ನ ಸದಸ್ಯರಿಗೆ ಸಲಹೆ ನೀಡಿದೆ.
ನಿಮಗೆ ಯಾರಾದರೂ ಮೇಲ್ಕಂಡ ವಿವರಗಳನ್ನು ಕೇಳಿಕೊಂಡು ಕರೆ ಮಾಡಿದ್ದರೆ; ನೀವು www.epfindia.gov.inಗೆ, ಇಪಿಎಫ್ಓ ಅಧಿಕೃತ ವೆಬ್ಸೈಟ್ಗೆ, ಭೇಟಿ ನೀಡಿ ಸಂಸ್ಥೆಗೆ ವಿಚಾರ ಮುಟ್ಟಿಸಬಹುದು. ಅಥವಾ ಟ್ವಿಟರ್ನಂತಹ ಸಾಮಾಜಿಕ ಮಾಧ್ಯಮ ತಾಣಗಳ ಮೂಲಕ ನೀವು ಇಪಿಎಫ್ಓ ಜೊತೆಗೆ ಸಂವಹನ ನಡೆಸಬಹುದು.
ಆನ್ಲೈನ್ ವಂಚನೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇಪಿಎಫ್ಓ ಚಂದಾದಾರರು ಡಿಜಿಲಾಕರ್ ಬಳಸಬಹುದು. ದಾಖಲೆಗಳು ಮತ್ತು ಪ್ರಮಾಣಪತ್ರಗಳ ಸಂಗ್ರಹಣೆ, ವಿನಿಮಯ ಮತ್ತು ಪರಿಶೀಲನೆಗಾಗಿ ಸುರಕ್ಷಿತವಾದ ಕ್ಲೌಡ್ ಆಧಾರಿತ ವೇದಿಕೆಯಾಗಿದೆ ಈ ಡಿಜಿಲಾಕರ್. ಈ ವ್ಯವಸ್ಥೆಯು ಡಿಜಿಟಲ್ ಇಂಡಿಯಾ ಅಭಿಯಾನದಡಿ ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಕೊಡಮಾಡಿರುವ ಸವಲತ್ತಾಗಿದೆ.
ಇದೇ ವೇಳೆ, ಸಾಧ್ಯವಾದಷ್ಟು ಬೇಗ ನಿಮ್ಮ ನಿಮ್ಮ ಇ-ನಾಮಿನೇಷನ್ ಪ್ರಕ್ರಿಯೆಗಳನ್ನು ಮುಗಿಸುವ ಮೂಲಕ ನಿಮ್ಮ ಕುಟುಂಬಸ್ಥರ ಸಾಮಾಜಿಕ ಭವಿಷ್ಯ ಖಾತ್ರಿ ಪಡಿಸಿಕೊಳ್ಳಿ ಎಂದು ಇಪಿಎಫ್ಓ ನೋಟ್ ಮಾಡಿದೆ.