ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ಜನಸಾಮಾನ್ಯರನ್ನು ಹೈರಾಣವಾಗಿಸಿದೆ. ಬೆಲೆ ಏರಿಕೆಯಿಂದ ಕಂಗೆಟ್ಟವರಿಗೆ ಸರ್ಕಾರ ಸ್ವಲ್ಪ ನೆಮ್ಮದಿ ನೀಡಿತ್ತು. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್ಗೆ 5 ಮತ್ತು 10 ರೂಪಾಯಿ ಇಳಿಸಿದೆ. ಅದಾದ ನಂತ್ರ ಭಾರತದಲ್ಲಿ ಇಂಧನ ಬೆಲೆಗಳು ಸ್ಥಿರವಾಗಿವೆ.
ಈಗ ಮತ್ತೊಂದು ಆಶಾದಾಯಕ ಸುದ್ದಿ ಸಿಗ್ತಿದೆ. ಪೆಟ್ರೋಲ್-ಡಿಸೇಲ್ ಬೆಲೆ ಇನ್ನಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಕಚ್ಚಾ ತೈಲ ಬೆಲೆ ಶೀಘ್ರವೇ ಇಳಿಕೆಯಾಗಲಿದೆ. ಒಂದು ರೂಪಾಯಿ ಇಳಿಕೆ ಸಾಧ್ಯತೆಯಿದೆ ಎಂದು ನಂಬಲಾಗಿದೆ.
ಯುರೋಪ್ನಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗ್ತಿದೆ. ಇದ್ರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಕೋವಿಡ್ ಸೋಂಕಿನಿಂದಾಗಿ ಕಳೆದ ವರ್ಷ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆಯಾಗಿತ್ತು. ಮತ್ತೊಮ್ಮೆ ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ತೈಲ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬೆಂಚ್ಮಾರ್ಕ್ ಬ್ರೆಂಟ್ ಕಚ್ಚಾ ತೈಲವು 10 ದಿನಗಳ ಹಿಂದೆ ಬ್ಯಾರೆಲ್ಗೆ 84.78 ಡಾಲರ್ ಇತ್ತು. ಶುಕ್ರವಾರ ಬ್ಯಾರೆಲ್ ಕಚ್ಚಾ ತೈಲ ಬೆಲೆ ಶೇಕಡಾ 6.95 ರಷ್ಟು ಕುಸಿದು 78.89 ಡಾಲರ್ಗಳಿಗೆ ಬಂದಿದೆ.
ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 103 ರೂಪಾಯಿ 97 ಪೈಸೆಯಿದೆ. ಡಿಸೇಲ್ ಬೆಲೆ ಲೀಟರ್ ಗೆ 86 ರೂಪಾಯಿ 67 ಪೈಸೆಗೆ ಮಾರಾಟವಾಗ್ತಿದೆ.