
ಬೆಂಗಳೂರು: ಮೈಕ್ರೋ ಫೈನಾನ್ಸ್ ಕಂಪನಿಗಳು, ಏಜೆನ್ಸಿಗಳು ಸಾಲ ಮರುಪಾವತಿ ವಿಚಾರದಲ್ಲಿ ಸಾಲಗಾರರಿಗೆ ಕಿರುಕುಳ ನೀಡುವುದನ್ನು ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊರಡಿಸಿದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಸುಗ್ರೀವಾಜ್ಞೆ -2025 ಅನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರಿನ ಕರ್ನಾಟಕ ಹೈರ್ ಪರ್ಚೇಸ್ ಅಸೋಸಿಯೇಷನ್ ಸುಗ್ರೀವಾಜ್ಞೆ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ. ನಾಗಪ್ರಸನ್ನ ಅವರ ಪೀಠ ತಿರಸ್ಕರಿಸಿ ಆದೇಶಿಸಿದೆ.
ಆರ್ಥಿಕವಾಗಿ ದುರ್ಬಲ ಗುಂಪುಗಳು ಮತ್ತು ವ್ಯಕ್ತಿ ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳಿಂದ ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಲೇವಾದೇವಿ ಸಂಸ್ಥೆಗಳು ಬಲವಂತದ ಸಾಲ ವಸೂಲಿ ಮಾಡುವುದನ್ನು ತಡೆಯುವ ಉದ್ದೇಶವನ್ನು ಸುಗ್ರೀವಾಜ್ಞೆ ಹೊಂದಿದೆ. ಮಿತಿಮೀರಿದ ಬಡ್ಡಿ, ಅನೈತಿಕ ವಸೂಲಿ ವಿಧಾನಗಳು ಎಂಬ ಎರಡು ಅಂಶಗಳಲ್ಲಿ ಎಲ್ಲೆಡೆ ಆತ್ಮಹತ್ಯೆ ನಡೆಯುತ್ತಿವೆ. ಇದರಿಂದ ಈ ನಿಯಮಗಳ ಜಾರಿ ಅಗತ್ಯವಿದೆ. ಸಾಲಗಾರ, ದುರ್ಬಲ ವರ್ಗಗಳು, ಸಾಲದಾತ ಹಾಗೂ ಸಾಲ ಎಂದರೇನು ಎಂಬ ಅಂಶವನ್ನು ವ್ಯಾಖ್ಯಾನಿಸಲಾಗಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಹೇಳಿದೆ.
ಶಾಸಕಾಂಗ ಜಾರಿ ಮಾಡುವ ಸುಗ್ರೀವಾಜ್ಞೆ ದುರುದ್ದೇಶಪೂರಿತವಾಗಿದ್ದಲ್ಲಿ, ತರ್ಕಬದ್ಧವಾಗಿದ್ದಲ್ಲಿ ಮಾತ್ರ ಅಮಾನ್ಯಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಅಂತಹ ಯಾವುದೇ ಅಂಶ ಕಂಡುಬಂದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.
ದುರ್ಬಲ ವರ್ಗದವರ ರಕ್ಷಣೆಗಾಗಿ ಈ ಸುಗ್ರೀವಾಜ್ಞೆ ತರಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ದುರ್ಬಲ ವರ್ಗದವರು ಎಂದರೆ ಯಾರು? ಮೈಕ್ರೋಫೈನಾನ್ಸ್ ಎಂದರೆ ಏನು ಎಂಬುದನ್ನು ಸುಗ್ರೀವಾಜ್ಞೆಯಲ್ಲಿ ವ್ಯಾಖ್ಯಾನಿಸಿಲ್ಲ ಎಂದು ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು.