ಚಿಕ್ಕ ಮಕ್ಕಳಲ್ಲಿ ಜಂತು ಹುಳಗಳ ಸಮಸ್ಯೆ ಇರುತ್ತದೆ. ಅನೇಕ ಬಾರಿ ಅದು ನಮ್ಮ ಗಮನಕ್ಕೇ ಬರುವುದಿಲ್ಲ. ಈ ಹುಳಗಳನ್ನು ಪಿನ್‌ವರ್ಮ್‌ಗಳು ಅಥವಾ ಥ್ರೆಡ್‌ವರ್ಮ್‌ಗಳು ಎಂದೂ ಕರೆಯುತ್ತಾರೆ. ಹೊಟ್ಟೆಯಲ್ಲಿನ ಹುಳುಗಳಿಂದಾಗಿ ಮಗು ಕಿರಿಕಿರಿ ಅನುಭವಿಸುತ್ತದೆ. ಮಗುವಿನ ಬೆಳವಣಿಗೆಯ ಮೇಲೂ ಅದು ಪರಿಣಾಮ ಬೀರುತ್ತದೆ. ಹೊಟ್ಟೆಯಲ್ಲಿ ಜಂತು ಹುಳಗಳಾಗುವೆ ಎಂಬುದನ್ನು ಸೂಚಿಸುವ ಕೆಲವೊಂದು ಲಕ್ಷಣಗಳಿವೆ. ಅವುಗಳನ್ನು ತಿಳಿದುಕೊಂಡರೆ ಕೂಡಲೇ ಮಗುವಿಗೆ ಚಿಕಿತ್ಸೆ ನೀಡಬಹುದು. ಹುಳಗಳ ಲಕ್ಷಣ ಮತ್ತು ಪರಿಹಾರವನ್ನು ನೋಡೋಣ.
ಸಣ್ಣ ಮಕ್ಕಳು ತಮ್ಮ ಕೈಗಳನ್ನು ಬಾಯಿಯಲ್ಲಿ ಹಾಕಿಕೊಳ್ಳುತ್ತಾರೆ. ಇದರಿಂದಾಗಿ ಹುಳುಗಳು ಅವರ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಅನೇಕ ಬಾರಿ ಮಕ್ಕಳು ಆಟವಾಡುವಾಗ ಕೊಳಕಾದ ಆಟಿಕೆಗಳನ್ನು ಬಾಯಿಯಲ್ಲಿಟ್ಟುಕೊಳ್ತಾರೆ. ಇದರಿಂದಾಗಿಯೂ ಹುಳುಗಳು ಅವರ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದಲ್ಲದೇ ಕೆಲವರಿಗೆ ಮಣ್ಣು ತಿನ್ನುವ ಅಭ್ಯಾಸವಿರುತ್ತದೆ. ಅದು ಕೂಡ ಜಂತು ಹುಳಗಳಾಗಲು ಕಾರಣ. ಈ ಹುಳುಗಳು ಹೊಟ್ಟೆಯಲ್ಲಿ ನಿಧಾನವಾಗಿ ಬೆಳೆಯುತ್ತಲೇ ಇರುತ್ತವೆ, ಇದರಿಂದ ಮಕ್ಕಳ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಅನೇಕ ಬಾರಿ, ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸದ ಕಾರಣ ಹೊಟ್ಟೆಯಲ್ಲಿ ಹುಳುಗಳು ಬೆಳೆಯಲು ಪ್ರಾರಂಭಿಸುತ್ತವೆ. ಅದಕ್ಕಾಗಿಯೇ ನೀವು ಮಗುವಿನ ಆಹಾರ ಮತ್ತು ಶುಚಿತ್ವದ ಬಗ್ಗೆ ಗಮನಹರಿಸಬೇಕು.
ಹುಳಗಳ ಲಕ್ಷಣಗಳು…
ಹೊಟ್ಟೆಯಲ್ಲಿ ಹುಳುಗಳಿದ್ದರೆ ಮಗುವಿನ ತೂಕ ಕಡಿಮೆಯಾಗುತ್ತದೆ. ಅತಿಯಾದ ಕೆಮ್ಮು ಅಥವಾ ಹಸಿವು ಕಡಿಮೆಯಾಗುವುದು ಮುಂತಾದ ಹಲವು ಲಕ್ಷಣಗಳು ಕಂಡುಬರುತ್ತವೆ. ಮಗುವಿನ ಹೊಟ್ಟೆಯಲ್ಲಿ ನಿರಂತರ ನೋವು ಇದ್ದರೆ ಮತ್ತು ಹೊಟ್ಟೆ ಬಿಗಿದುಕೊಂಡಿದ್ದರೆ ಅದು ಕೂಡ ಜಂತು ಹುಳವಿದೆ ಎಂಬ ಸಂಕೇತ. ಸಮಸ್ಯೆ ತುಂಬಾ ಹೆಚ್ಚಾದಾಗ ವಾಂತಿ ಸಹ ಆಗುತ್ತದೆ. ನಿಮ್ಮ ಮಗುವಿನಲ್ಲಿ ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ನೀವು ತಕ್ಷಣ ಪರಿಹಾರ ಹುಡುಕಬೇಕು.
ಜಂತು ಹುಳಗಳ ನಿವಾರಣೆ…
ಈ ಎಲ್ಲಾ ಲಕ್ಷಣಗಳು ನಿಮ್ಮ ಮಗುವಿನಲ್ಲಿ ಕಾಣಿಸಿಕೊಂಡರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅನೇಕ ಆರೋಗ್ಯ ಸಂಸ್ಥೆಗಳಲ್ಲಿ ಜಂತುಹುಳು ನಿವಾರಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೀವು ನಿಮ್ಮ ಮಗುವನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಹುಳುಗಳನ್ನು ತೊಡೆದುಹಾಕಲು ಔಷಧಿ ನೀಡಿ. ಆದರೆ ಇದಕ್ಕಾಗಿ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. ಇದರ ಜೊತೆಜೊತೆಗೆ ಮಗುವಿನ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕಲುಷಿತ ಆಹಾರದಿಂದ ದೂರವಿರುವಂತೆ ನೋಡಿಕೊಳ್ಳಿ.