ಇತ್ತೀಚಿನ ದಿನಗಳಲ್ಲಿ ಜನರು ಹೂಡಿಕೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಸುರಕ್ಷಿತ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಹೂಡಿಕೆದಾರರು ಎಸ್ಐಪಿ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 67,000 ಕೋಟಿ ರೂಪಾಯಿಯನ್ನು ಎಸ್ ಐ ಪಿ ಮೇಲೆ ಹೂಡಿಕೆ ಮಾಡಲಾಗಿದೆ. ಅಸೋಸಿಯೇಷನ್ ಆಫ್ ಮ್ಯೂಚುಯಲ್ ಫಂಡ್ಸ್ ಇನ್ ಇಂಡಿಯಾ ಈ ಮಾಹಿತಿ ನೀಡಿದೆ.
2020-21ನೇ ಹಣಕಾಸು ವರ್ಷದಲ್ಲಿ ಈ ಮೂಲಕ 96,080 ಕೋಟಿ ರೂಪಾಯಿ ಹೂಡಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಮ್ಯೂಚುವಲ್ ಫಂಡ್ ಎಸ್ಐಪಿ ಕೊಡುಗೆ ಎರಡು ಪಟ್ಟು ಹೆಚ್ಚಾಗಿದೆ. 2016-17ನೇ ಹಣಕಾಸು ವರ್ಷದಲ್ಲಿ ಈ ಪ್ರಮಾಣ 43,921 ಕೋಟಿ ರೂಪಾಯಿಯಾಗಿತ್ತು.
ಅಂಕಿಅಂಶಗಳ ಪ್ರಕಾರ, ಎಸ್‌ಐಪಿಗಳ ಮೂಲಕ ಮಾಸಿಕ ಹೂಡಿಕೆ ಅಕ್ಟೋಬರ್‌ನಲ್ಲಿ ಸಾರ್ವಕಾಲಿಕ ಗರಿಷ್ಠ 10,519 ಕೋಟಿ ರೂಪಾಯಿ ತಲುಪಿದೆ. ಸೆಪ್ಟೆಂಬರ್‌ನಲ್ಲಿ ಇದು 10,351 ಕೋಟಿ ರೂಪಾಯಿಯಾಗಿತ್ತು.
ಎಸ್ಐಪಿ ಕಳೆದ ಐದು ವರ್ಷಗಳಲ್ಲಿ, ವರ್ಷದಿಂದ ವರ್ಷಕ್ಕೆ ಶೇಕಡಾ 30ರಷ್ಟು ಬೆಳೆದಿದೆ. ಇದು ಮ್ಯೂಚುವಲ್ ಫಂಡ್ ಉದ್ಯಮದ ಒಟ್ಟು ಆಸ್ತಿಯ ಎರಡು ಪಟ್ಟು ಹೆಚ್ಚು ಎನ್ನಲಾಗಿದೆ. ಅಕ್ಟೋಬರ್‌ನಲ್ಲಿ ಎಸ್‌ಐಪಿ ಹೂಡಿಕೆಗಾಗಿ ಒಟ್ಟು 23.83 ಲಕ್ಷ ಹೊಸ ನೋಂದಣಿ ನಡೆದಿವೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಮೊದಲ ಏಳು ತಿಂಗಳ ಅವಧಿಯಲ್ಲಿ ಒಟ್ಟು 1.5 ಕೋಟಿ ನೋಂದಣಿಯಾಗಿದೆ.