ಕೊಡಗು ಜಿಲ್ಲೆಯ ಗೋಣಿಕೊಪ್ಪಲು ಸಮೀಪ ಡಿಸೆಂಬರ್ 9 ರಂದು ನಡೆದಿದ್ದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ದರೋಡೆ ಎಸಗಿದ ತಂಡದಲ್ಲಿದ್ದ ಆರೋಪಿಯೊಬ್ಬ ಈ ಮೊದಲೇ ಜೈಲಿನಲ್ಲಿದ್ದು, ಪೆರೋಲ್ ಮೇಲೆ ಹೊರ ಬಂದ ವೇಳೆ ಕೃತ್ಯದಲ್ಲಿ ಭಾಗಿಯಾಗಿರುವ ವಿಷಯ ಬೆಳಕಿಗೆ ಬಂದಿದೆ.
ಕೇರಳದ ಶಂಜಾದ್ ಎಂಬವರು ಮೈಸೂರಿನಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಿ 61 ಲಕ್ಷ ರೂಪಾಯಿ ಹಣದೊಂದಿಗೆ ವಾಪಸ್ ಹೋಗುವಾಗ ಹತ್ತರಿಂದ ಹದಿನೈದು ಮಂದಿ ಇದ್ದ ತಂಡವು ಅವರನ್ನು ಗೋಣಿಕೊಪ್ಪಲು ಸಮೀಪ ಅಡ್ಡಗಟ್ಟಿ 50 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿತ್ತು. ಶಂಜಾದ್ ಅವರು ಮಾಡಿದ್ದ ವ್ಯವಹಾರಕ್ಕೆ ತೆರಿಗೆ ಪಾವತಿ ಆಗಿರದ ಕಾರಣ ಅವರು 50 ಲಕ್ಷ ರೂಪಾಯಿ ದೋಚಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕೃತ್ಯದಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿ 3 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿದ್ದ ಮತ್ತೊಬ್ಬ ಆರೋಪಿ ದಿನೇಶ್ ಎಂಬಾತ ಕೇರಳದ ತ್ರಿಶೂರ್ ಜೈಲಿನಲ್ಲಿ ಬಂದಿಯಾಗಿದ್ದು, ಪೆರೋಲ್ ಮೇಲೆ ಬಂದ ವೇಳೆ ಈ ದರೋಡೆ ಕೃತ್ಯದಲ್ಲಿ ಪಾಲ್ಗೊಂಡಿದ್ದ. ಬಳಿಕ ಆತ ಜೈಲಿಗೆ ವಾಪಸ್ ಆಗಿದ್ದು, ಇದೀಗ ಆತನನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆದಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.