
ಹೆಣ್ಣುಮಕ್ಕಳ ತಿಂಗಳ ರಜಾ ದಿನಗಳು ಅಥವಾ ಮುಟ್ಟಿನ ದಿನಗಳ ಬಗ್ಗೆ ಇಂದಿಗೂ ಕೂಡ ಅದೆಷ್ಟೋ ಜನರು ಓಪನ್ ಆಗಿ ಮಾತನಾಡಲು ಹಿಂಜರಿಯುತ್ತಾರೆ. ಆ ದಿನಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ನೋವು, ಸಂಕಟಗಳ ನಡುವೆ ಮಡಿ, ಮೈಲಿಗೆ ಎಂಬ ಪದ್ಧತಿ ಹೆಸರಲ್ಲಿ ಮನೆಯಲ್ಲಿಯೇ ಒಂದು ಮೂಲೆಯಲ್ಲಿ ಕೂರಿಸುವ ಸ್ಥಿತಿ ಇಂದಿಗೂ ಅದೆಷ್ಟೋ ಕಡೆ ಇದೆ. ಇಂತಹ ಮೂಢನಂಬಿಕೆ, ತಪ್ಪು ಕಲ್ಪನೆಯನ್ನು ತೊಡೆದು ಹಾಕಿ ಹೆಣ್ಣುಮಕ್ಕಳ ಆ ದಿನಗಳಲ್ಲಿ ವಹಿಸಬೇಕಾದ ಕಾಳಜಿ, ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಟ್ಟಿನ ದಿನಗಳಲ್ಲಿ ಏನು ಮಾಡಬೇಕು? ಯಾವರೀತಿ ಜಾಗೃತಿ ವಹಿಸಬೇಕು ಎಂಬ ಬಗ್ಗೆ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಶಾಲಾ ಮಕ್ಕಳಿಗೆ ಪಾಠ ಮಾಡಿದ್ದಾರೆ. ಈ ಮೂಲಕ ವಿಶೇಷ ಪ್ರಯತ್ನ ಮಾಡಿದ್ದಾರೆ.
ಶಾಲೆಗಳಲ್ಲಿ ಎಳೆಯ ವಿದ್ಯಾರ್ಥಿನಿಯರಿಗೆ ಮುಟ್ಟು ಅಥವಾ ಪೀರಿಯಡ್ಸ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ಹಾಡಿನ ಮೂಲಕ ವಿದ್ಯಾರ್ಥಿನಿಯರಲ್ಲಿ ಜಾಗೃತಿ ಮೂಡಿಸಿದ್ದಾರೆ. ಪೀರಿಯಡ್ಸ್ ಅಂದ್ರೆ ಹೆಲ್ದಿಯಾಗಿದ್ದೀರಿ ನೀವು……ಎಂಬ ತಿಳುವಳಿಕೆ ಸಾರಿದ್ದಾರೆ. ಒಂದೇ ವಿಡಿಯೋ ಸಾಂಗ್ ನಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು, ಬೆಂಗಾಲಿ, ಒಡಿಶಾ ಸೇರಿದಂತೆ ಹಲವು ಭಾಷೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಪ್ರಯತ್ನ ನಮ್ಮ ಸೆಲೆಬ್ರಿಟಿಗಳಿಗೂ ಸ್ಫೂರ್ತಿಯಾಗಲಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.